ಕಮ್ಯುನಿಸ್ಟ್ ಚಳವಳಿಯ ದಣಿವರಿಯದ ಹೋರಾಟಗಾರ ಕೆ. ಆರ್. ಶ್ರೀಯಾನ್ | Vartha Bharati- ವಾರ್ತಾ ಭಾರತಿ

ಕಮ್ಯುನಿಸ್ಟ್ ಚಳವಳಿಯ ದಣಿವರಿಯದ ಹೋರಾಟಗಾರ ಕೆ. ಆರ್. ಶ್ರೀಯಾನ್

 ಕೆ. ಆರ್.ಶ್ರೀಯಾನ್‌ರಷ್ಟು ದೀರ್ಘಕಾಲ ಕಮ್ಯುನಿಸ್ಟ್ ಚಳವಳಿಯಲ್ಲಿ ನೇತೃತ್ವ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುತ್ತಿರುವವರು ಪ್ರಸ್ತುತ ರಾಜ್ಯದ ಕಮ್ಯುನಿಸ್ಟ್ ಚಳವಳಿಯಲ್ಲಿ ಬೇರೆ ಯಾರೂ ಇಲ್ಲ. ಗುರುವಾರ(ಮೇ 25)ದಂದು 84ನೆ ವರ್ಷಕ್ಕೆ ಕಾಲಿಟ್ಟ ಶ್ರೀಯಾನ್ ಕಳೆದ 63 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು. 1948-51ರ ಕಾಲಾವಧಿಯಲ್ಲಿ ಸ್ವತಂತ್ರ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ ನಿಷೇಧವಾಗಿತ್ತು. ಆ ವೇಳೆ ಕಮ್ಯುನಿಸ್ಟ್ ನಾಯಕರಾದ ಬಿ.ವಿ.ಕಕ್ಕಿಲಾಯ ಮತ್ತಿಬ್ಬರು ಭೂಗತರಾಗಿ ರಾಮ ದೇವಾಡಿಗರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರು ಅದೇ ಮನೆಗೆ ದಾಳಿ ಮಾಡಿದರು. ಆದರೆ ಅವರು ಮುನ್ನಾ ದಿನವಷ್ಟೇ ಆ ಮನೆಬಿಟ್ಟು ಬೇರೆಡೆ ತೆರಳಿದ್ದರು.ಆಗ ಕೆ.ಆರ್.ಶ್ರೀಯಾನ್ ಪಾದುವ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದರು. ಪೊಲೀಸರು ಹುಡುಗನನ್ನು ಗದರಿ ಕೇಳಿದಾಗ ಆತ ಕೊಟ್ಟ ಉತ್ತರ, ‘ಯಾರೂ ಮನೆಯಲ್ಲಿ ಇರಲಿಲ್ಲವಲ್ಲ’ ಎಂದಾಗಿತ್ತು. ಪೊಲೀಸರ ಮರುಪ್ರಶ್ನೆ: ಕಮ್ಯುನಿಸ್ಟರು ನಿನಗೆ ಗೊತ್ತೇ? ಅದಕ್ಕೆ ‘ಹಾಗೆಂದರೆ ಯಾರು?’ ಎಂದು ಪೊಲೀಸರಿಗೆ ಮರು ಪ್ರಶ್ನೆ ಹಾಕಿ ಯಾಮಾರಿಸಿದ್ದರು ಬಾಲಕ ಶ್ರೀಯಾನ್

ಮಂಗಳೂರಿನ ಹೊರವಲಯದ ಕೊಂಚಾಡಿಯಲ್ಲಿ ಗುರುವಮ್ಮ ಮತ್ತು ರಾಮ ದೇವಾಡಿಗರದ್ದು ಬಡ ರೈತ ಕುಟುಂಬ. ಮಕ್ಕಳ ಪೈಕಿ ಮೂವರು ಪುತ್ರಿಯರು ಗೋಡಂಬಿ ಕಾರ್ಖಾನೆಗೂ, ಮೂವರು ಪುತ್ರರು ಹೆಂಚಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು. ಇನ್ನೋರ್ವ ಪುತ್ರ ಕೆ.ಆರ್.ಶ್ರಿಯಾನ್ ಕಲಿಯುತ್ತಿದ್ದರು.

 1952ರಲ್ಲಿ ಮಂಗಳೂರಿನ ಗಣಪತಿ ಹೈಸ್ಕೂಲ್‌ನಲ್ಲಿ ಮೆಟ್ರಿಕ್ಯುಲೇಷನ್ ಮಾಡುತ್ತಿರುವಾಗಲೇ ಸ್ವತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು. ಆ ವೇಳೆಗೆ ದ.ಕ. ಜಿಲ್ಲೆಯ ಜನರಿಗೆ ಆಯ್ಕೆಗೆ ಇದ್ದುದು ಎರಡೇ ಪಕ್ಷಗಳು-ಒಂದು ಕಾಂಗ್ರೆಸ್, ಇನ್ನೊಂದು ಕಮ್ಯುನಿಸ್ಟ್. ಆಗ ತನ್ನ ಗೆಳೆಯರೊಂದಿಗೆ ಶ್ರೀಯಾನ್ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎ. ಶಾಂತಾರಾಮ ಪೈ ಪರವಾಗಿ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸಿದ್ದರು. ಆ ವೇಳೆ ಇವರು ಅಂದಿನ ಕಮ್ಯುನಿಸ್ಟ್ ನಾಯಕರಾದ ಡಾ.ಎಂ.ಎಸ್.ಶಾಸ್ತ್ರಿ, ಪಿ.ರಾಮಚಂದ್ರರಾಯರ ಕಣ್ಣಿಗೆ ಬಿದ್ದರು. ಡಾ. ಎಂ. ಎಸ್. ಶಾಸ್ತ್ರಿಯಿಂದ ಕಮ್ಯುನಿಸ್ಟ್ ಪಕ್ಷ ಸೇರಲು ಇವರಿಗೆ ಆಹ್ವಾನ ಬಂತು. ಪಕ್ಷ ಸದಸ್ಯನಾಗಿ ಪ್ರತಿಜ್ಞೆ ಕೈಗೊಂಡು ಕಾರ್ಯ ನಿರ್ವಹಿಸಲು ಪ್ರವೇಶಿಸಿದ್ದು ಮಂಗಳೂರು ನಗರದ ಮೈದಾನ ರಸ್ತೆಯಲ್ಲಿರುವ ರೈತ ಸಂಘದ ಕಚೇರಿಗೆ. ಸಂಘದ ಅಧ್ಯಕ್ಷರಾದ ಎ.ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಎಂ.ಎಚ್.ಕೃಷ್ಣಪ್ಪ, ಸಿಂಪ್ಸನ್ ಸೋನ್ಸ್, ಬಿ.ವಿ.ಕಕ್ಕಿಲ್ಲಾಯ, ಡಾ.ಎಂ.ಎಸ್.ಶಾಸ್ತ್ರಿ, ಎ.ಶಾಂತಾರಾಮ ಪೈ, ಪಿ.ರಾಮಚಂದ್ರ ರಾವ್ ಮೊದಲಾದ ಸಮರ್ಥ ಕಮ್ಯುನಿಸ್ಟ್ ಮುಖಂಡರ ಕಾರ್ಯವೈಖರಿಯಿಂದ, ಅಗ್ರ ಕಮ್ಯುನಿಸ್ಟ್ ನಾಯಕರ ಮಾರ್ಗದರ್ಶನದಲ್ಲಿ ಕೆ.ಆರ್. ಶ್ರೀಯಾನ್ ಪರಿಣತ ಕಮ್ಯುನಿಸ್ಟ್ ಕಾರ್ಯಕರ್ತರಾದರು.

ನಾಟಕ ರಚನೆ, ನಟನೆ, ಕ್ರೀಡಾಪಟುವೂ ಆಗಿದ್ದ ಶ್ರೀಯಾನ್ ತನ್ನ ಊರಿನ ಯುವಕರನ್ನು ಸೇರಿಸಿ ಕೊಂಚಾಡಿ ಯುವಕ ಕಲಾ ಮಂಡಲಿ ಸ್ಥಾಪಿಸಿ ನಾಟಕ ಆಡಿಸಿದರು, ನಟಿಸಿದರು, ಕ್ರೀಡೆಗಳನ್ನು ಏರ್ಪಡಿಸಿದರು, ಅನಕ್ಷರಸ್ಥರಿಗೆ ರಾತ್ರಿ ಶಾಲೆ ನಡೆಸಿದರು; ಜನಪದ ಕಲಾ ಮಂಡಳಿಯನ್ನು ಇಪ್ಟಾ ಮಾದರಿಯಲ್ಲಿ ಸಂಘಟಿಸಿದಾಗ ನ್ಯಾಯವಾದಿ ಪಿ.ಎಂ.ನಾರಾಯಣ ಮೂರ್ತಿ ಅದರ ಅಧ್ಯಕ್ಷರು, ಕೆ. ಟಿ. ಭಂಡಾರಿ ಕಾರ್ಯದರ್ಶಿ. ಯುವಜನ ಸಂಘಟನೆ ಡೆಮಾಕ್ರಟಿಕ್ ಯೂತ್ ಲೀಗ್ ಸಂಘಟಿಸಲು ಮಾಸ್ಟ್ರು ಪಿ. ರಾಮಚಂದ್ರ ರಾಯರ ಪ್ರೇರಣೆ, ಅದಕ್ಕೆ ಕೆ. ಆರ್. ಶ್ರೀಯಾನ್ ಕಾರ್ಯದರ್ಶಿ. ಡಾ.ಎಂ.ಎಸ್. ಶಾಸ್ತ್ರಿ ಅಧ್ಯಕ್ಷರು. ಡಿವೈಎಲ್‌ನ ಘಟಕಗಳು ಮಂಗಳೂರು ನಗರಾದ್ಯಂತ ನಾಟಕ, ಕ್ರೀಡೆ, ವಯಸ್ಕರ ಶಾಲೆಗಳನ್ನು ನಡೆಸಲು ಶ್ರೀಯಾನ್ ಮಾರ್ಗದರ್ಶನ ನೀಡಿದರು. 1954ರಿಂದ 1978ರವರೆಗಿನ ಅವಧಿಯಲ್ಲಿ 15 ಕನ್ನಡ ಹಾಗೂ ತುಳು ನಾಟಕಗಳನ್ನು ರಚಿಸಿದರು. 1978ರಲ್ಲಿ ಅವರು ಸಿಪಿಐ(ಎಂ) ಪಕ್ಷದ ದ.ಕ.ಜಿಲ್ಲಾ ಕಾರ್ಯದರ್ಶಿಯಾದರು. ಆದಾಗ್ಯೂ 1980ರಲ್ಲಿ ಪಕ್ಷದ ನಿಧಿಗಾಗಿ ಅವರು ತೊಪ್ಪಿಲ್‌ಬಾಸಿ ಅವರ ನಾಟಕ ಆಧರಿಸಿ ‘ಇಲ್‌ಲ್ ದೆತ್ತಿ ಮಗೆ ’ಎಂಬ ತುಳು ನಾಟಕ ಬರೆದು ನಿರ್ದೇಶಿಸಿದರು. ಬಹುಶಃ ಅದು ಅವರ ಅತ್ಯುತ್ತಮ ನಾಟಕ. ಹೋರಾಟಕ್ಕೆ ಪೂರಕವಾದ ನಾಟಕ, ಯಕ್ಷಗಾನ ರಚಿಸಿದ್ದಲ್ಲದೆ ‘ರೈತ ವಿಜಯ’ ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ ರೈತ ಚಳವಳಿಗೆ ಮತ್ತೊಂದು ಹೊಸ ಆಯಾಮ ನೀಡಿದರು. *ದಣಿವರಿಯದ ಹೋರಾಟಗಾರ: ‘ರೈತ ಸಂಘ’ವು ‘ಉಳುವವನೇ ಹೊಲದೊಡೆಯ’ ಎಂಬ ಪ್ರಮುಖ ಘೋಷಣೆಯಡಿಯಲ್ಲಿ ಹಾಗೂ ಎ. ಕೃಷ್ಣ ಶೆಟ್ಟಿ, ಎಂ. ಎಚ್. ಕೃಷ್ಣಪ್ಪರಂಥ ನಾಯಕರ ನೇತೃತ್ವದಲ್ಲಿ ಹಲವಾರು ಸಮರಧೀರ ಭೂಮಿ ಹೋರಾಟಗಳನ್ನು ನಡೆಸುವಾಗ ಅದಕ್ಕೆ ಸಾಕ್ಷಿಯಾಗಿ ಆ ಹೋರಾಟಗಳಲ್ಲಿ ಪಾಲ್ಗೊಂಡವರು ಕೆ.ಆರ್.ಶ್ರೀಯಾನ್. ಅವರ ಕ್ರಿಯಾಶೀಲತೆಯನ್ನು ಗುರುತಿಸಿ ಪಕ್ಷವು ಅವರಿಗೆ ಪಕ್ಷದ ಮುದ್ರಣಾಲಯ, ಪ್ರಕಾಶನ, ಪುಸ್ತಕ ಮಳಿಗೆ ಹಾಗೂ ಪಕ್ಷದ ಪತ್ರಿಕೆ ‘ಅರುಣ’ ಪ್ರಕಟಿಸುವ ಜವಾಬ್ದಾರಿ ವಹಿಸಿತು. 1965ರಿಂದ ಸಿಪಿಐ(ಎಂ) ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪಕ್ಷದ ಪತ್ರಿಕೆ ‘ಐಕ್ಯರಂಗ’ದ ನಿರ್ವಹಣೆ ನಡೆಸಿದರು. ಪತ್ರಿಕಾ ಸಂಪಾದಕರು 1965ರಲ್ಲಿ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಬಂಧನದಲ್ಲಿದ್ದಾಗಲೂ, 1975-77ರ ತುರ್ತು ಪರಿಸ್ಥಿತಿ ವೇಳೆ ಪತ್ರಿಕಾ ಸ್ವಾತಂತ್ರ್ಯಕ್ಕೇ ನಿರ್ಬಂಧಗಳಿದ್ದಾಗಲೂ ಶ್ರೀಯಾನರೇ ಪತ್ರಿಕೆಯನ್ನು ಪ್ರಕಟಿಸುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. 1978ರಲ್ಲಿ ಐಕ್ಯರಂಗ ಬೆಂಗಳೂರಿಗೆ ಸ್ಥಾನಾಂತರವಾಗುವವರೆಗೆ ಅವರೇ ಪತ್ರಿಕೆ ನಡೆಸುತ್ತಿದ್ದರು. 1964ರಲ್ಲಿ ಕಮ್ಯುನಿಸ್ಟ್ ಪಕ್ಷ ವಿಭಜನೆಯಾದಾಗ, ಜಿಲ್ಲೆಯ ಪ್ರಮುಖ ನಾಯಕರು ಸಿಪಿಐನಲ್ಲೇ ಉಳಿದಾಗ, ಎಂ.ಎಚ್.ಕೃಷ್ಣಪ್ಪ, ಎ.ಕೃಷ್ಣ ಶೆಟ್ಟಿ, ಪಿ.ರಾಮಚಂದ್ರರಾವ್‌ರೊಂದಿಗೆ ಕೆ.ಆರ್. ಶ್ರೀಯಾನ್ ಅವರು ಸಿಪಿಐ(ಎಂ) ಪಕ್ಷವನ್ನು ದ. ಕ. ಜಿಲ್ಲೆಯಲ್ಲಿ ಸಂಘಟಿಸಿದರು. ರೈತ, ಕಾರ್ಮಿಕ ಸಂಘಟನೆಗಳಲ್ಲೂ ವಿಭಜನೆಗಳಾದುವು. ರೈತ ಸಂಘಟನೆಯೊಂದಿಗೆ ಕಾರ್ಮಿಕ ಸಂಘಟನೆಗಳಲ್ಲೂ ನೇತೃತ್ವದ ಜವಾಬ್ದಾರಿಗಳು ಶ್ರೀಯಾನ್‌ರನ್ನು ಹುಡುಕಿ ಬಂದವು. ಗೋಡಂಬಿ, ಹೆಂಚು, ಬೀಡಿ ಕಾರ್ಮಿಕ ಸಂಘಟನೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನೇತೃತ್ವ ವಹಿಸಿ ಅನೇಕ ಕಾರ್ಮಿಕ ಹೋರಾಟಗಳನ್ನು ನಡೆಸಿ, ಆ ವಿಭಾಗದ ಕಾರ್ಮಿಕರಿಗೆ ಸವಲತ್ತುಗಳನ್ನು ತೆಗೆಸಿಕೊಡಲು ಕೆ. ಆರ್. ಶ್ರೀಯಾನ್ ಕಾರಣರಾದರು. ಇಂದಿಗೂ ಶ್ರೀಯಾನ್ ಜಿಲ್ಲೆಯ ಗೋಡಂಬಿ ಕಾರ್ಮಿಕ ಸಂಘಟನೆಯ ಮುಖಂಡರಾಗಿದ್ದಾರೆ. ಬೀಡಿ ಕಾರ್ಮಿಕರು ಪ್ರಾವಿಡೆಂಟ್ ಫಂಡ್‌ಗಾಗಿ ನಡೆಸಿದ 1978ರ ಅನ್ನಸತ್ಯಾಗ್ರಹ, ಧೂಮಪಾನ ನಿಷೇಧ ಕಾಯ್ದೆ ವಿರುದ್ಧ 2014ರಲ್ಲಿ ನಡೆದ ಪ್ರತಿಭಟನಾ ರ್ಯಾಲಿ, ಕೊಟ್ಪಾಕಾಯ್ದೆ ವಿರುದ್ಧ 2015ರ ಪ್ರತಿಭಟನೆ, ರೇಶನ್ ಕೋಟಾ ಹೆಚ್ಚಿಸಲು ಆಗ್ರಹಿಸಿದ 1988ರ ಅನ್ನ ಹೋರಾಟ, ಅಡಿಕೆ ತೆಂಗು ಬೆಳೆಗಾರರ ರಕ್ಷಣೆಗಾಗಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಡೆಸಿದ ಹಲವು ಹೋರಾಟಗಳು, ನಿವೇಶನ ಹಾಗೂ ಹಕ್ಕುಪತ್ರಗಳಿಗಾಗಿ ನಡೆಸುವ ಭೂಮಿ ಹೋರಾಟಗಳು, ಗ್ಯಾಟ್ ಒಪ್ಪಂದದ ವಿರುದ್ಧ 1994ರ ಹೋರಾಟ, ಕೊಂಕಣ ರೈಲ್ವೆ ಹಾಗೂ ತೈಲಾಗಾರಕ್ಕಾಗಿ ಆಗ್ರಹಿಸಿದ 1985ರ ಮತ್ತು 1989ರ ವಾಹನ ಜಾಥಾಗಳು, ಚರ್ಚ್ ದಾಳಿ ವಿರುದ್ಧ, ಮಡೆಸ್ನಾನ, ಪಂಕ್ತಿ ಭೇದ ವಿರುದ್ಧ ಹಾಗೂ ಮಹಿಳೆಯರ ಅತ್ಯಾಚಾರದ ವಿರುದ್ಧ ನಡೆಸಿದ ಅನೇಕ ಹೋರಾಟ ಅಲ್ಲದೆ ಇನ್ನೂ ನೂರಾರು ಚಳವಳಿಗಳಲ್ಲಿ ಶ್ರೀಯಾನ್ ಕಮ್ಯುನಿಸ್ಟ್ ಚಳವಳಿಗೆ ಮಾರ್ಗದರ್ಶನ ನೀಡಿದರು.

1978ರಿಂದ 30 ವರ್ಷ ಕಾಲ ಸಿಪಿಐ(ಎಂ) ಪಕ್ಷದ ದ. ಕ. ಜಿಲ್ಲಾ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ಹಾಗೂ ಬಳಿಕವೂ ಈ ರಾಜಕೀಯ, ಕಾರ್ಮಿಕ ಹೋರಾಟಗಳನ್ನು ನಡೆಸಿದ್ದಾರೆ. 1978ರಿಂದ 36 ವರ್ಷಗಳ ಕಾಲ ಪಕ್ಷದ ರಾಜ್ಯ ಸಮಿತಿಗೂ ಆಯ್ಕೆಯಾಗಿ, 2014ರವರೆಗೆ ರಾಜ್ಯ ಸಮಿತಿಯು ಹಾಕಿಕೊಂಡಿದ್ದ ಕಾರ್ಯಕ್ರಮಗಳ ಸೂತ್ರಧಾರಿಗಳಲ್ಲೊಬ್ಬರಾಗಿದ್ದಾರೆ. ಸಿಪಿಐ(ಎಂ) ಪಕ್ಷದ ಅಗ್ರಗಣ್ಯ ನಾಯಕರಾಗಿದ್ದ ಎನ್.ಎಲ್.ಉಪಾಧ್ಯಾಯ, ಎನ್.ಕೆ. ಉಪಾಧ್ಯಾಯ, ಎಸ್.ಸೂರ್ಯನಾರಾಯಣ ರಾವ್, ಪಿ.ರಾಮಚಂದ್ರ ರಾವ್, ಸಿ. ನಂಜುಂಡಪ್ಪ ಮೊದಲಾದವರೊಂದಿಗೂ, ಈಗ ಮುಂಚೂಣಿ ನಾಯಕರಾಗಿರುವ ವಿ. ಜೆ.ಕೆ.ನಾಯರ್, ಜಿ. ಎನ್. ನಾಗರಾಜ್, ಜಿ. ವಿ. ಶ್ರೀರಾಮರೆಡ್ಡಿ, ನಿತ್ಯಾನಂದ ಸ್ವಾಮಿ ಮೊದಲಾದವರೊಂದಿಗೂ ಕೆಲಸ ಮಾಡಿ, ಎರಡು ವರ್ಷಗಳ ಹಿಂದಷ್ಟೇ ವಯೋಮಾನ ಕಾರಣದಿಂದ ಪಕ್ಷದ ರಾಜ್ಯ ಸಮಿತಿಯಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಬಳಿಕವೂ ದ. ಕ. ಜಿಲ್ಲೆಯಲ್ಲಿ ಪಕ್ಷದ, ರೈತ ಸಂಘದ ಹಾಗೂ ಕಾರ್ಮಿಕ ಚಳವಳಿಗೆ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ.

1953ರಲ್ಲೇ ಮೆಟ್ರಿಕ್ ಮುಗಿಸಿದ ತರುಣನೊಬ್ಬನಿಗೆ ಎಷ್ಟೊಂದು ಅವಕಾಶಗಳಿದ್ದರೂ ಅಂಥ ಉನ್ನತ ಜೀವನದ ಅವಕಾಶಗಳನ್ನು ನಿರಾಕರಿಸಿ, ಕಮ್ಯುನಿಸ್ಟರ ಕಷ್ಟ ಜೀವನವನ್ನೇ ಆಯ್ಕೆ ಮಾಡಿಕೊಂಡ ಕೆ. ಆರ್. ಶ್ರೀಯಾನ್‌ರದ್ದು ನಿಜವಾದ ಕಮ್ಯುನಿಸ್ಟನ ಸರಳ ಬದುಕು. ತತ್ವ ಹಾಗೂ ಸಂಘಟನೆಗೆ ನಿಷ್ಠೆ, ಶಿಸ್ತು ಹಾಗೂ ಸದಾ ಕಾರ್ಯಶೀಲತೆಯನ್ನೇ ತಮ್ಮ ಬದುಕಿನ ಆದರ್ಶವಾಗಿರಿಸಿ ಕೊಂಡವರು.

 ಅವರು ಪಕ್ಷದ ನಿರ್ಧಾರಗಳನ್ನು ಜಾರಿ ಮಾಡುವುದರಲ್ಲಿ ಕಠಿಣರಾಗಿದ್ದರೂ, ಅಂತರಂಗದಲ್ಲಿ ಮೃದು, ಮಿತಭಾಷಿ. ತಿಳಿಹಾಸ್ಯದಿಂದ ಕೂಡಿದ ನಿರಾಳ ನಡವಳಿಕೆ ಅವರದು. ಕವ್ಯೂನಿಸಂ ಮುಂದೊಂದು ದಿನ ಮೇಲೆದ್ದು ಬಂದೇ ಬರುತ್ತದೆಂಬ ಅದಮ್ಯ ಆಶಾವಾದ ಅವರ ಈ ದೃಢ ನಿಲುವಿಗೆ ಕಾರಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top