ವಕ್ಫ್ ವರದಿ ಮುಂದಿನ ಅಧಿವೇಶನದಲ್ಲಿ ಮಂಡನೆ: ಸಚಿವ ಜಯಚಂದ್ರ
ರಾಜ್ಯ ವಿಧಾನಮಂಡಲ ಅಧಿವೇಶನ
ಬೆಂಗಳೂರು, ಮಾ.3: ವಕ್ಫ್ ಆಸ್ತಿಗಳಿಗೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಿದ್ಧಪಡಿಸಿದ್ಧ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಗುರುವಾರ ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಸದಸ್ಯ ಗೋ.ಮಧುಸೂದನ್ ಸೇರಿದಂತೆ ಇನ್ನಿತರರು ಪ್ರಸ್ತಾಪಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿದರು. ಇದಕ್ಕೂ ಮುನ್ನ ಜಯಚಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನಡುವೆ ಅನ್ವರ್ ಮಾಣಿಪ್ಪಾಡಿ ಸಿದ್ಧಪಡಿಸಿದ ವರದಿಯನ್ನು ಮಂಡಿಸುವುದರ ಬಗ್ಗೆ ತೀವ್ರ ವಾಗ್ವಾದ ನಡೆಯಿತು.
ಮಾಣಿಪ್ಪಾಡಿ ಸಿದ್ಧಪಡಿಸಿದ ವರದಿಯನ್ನು ನಾಳೆಗೆ ಮಂಡಿಸುತ್ತೇವೆಂದು ಆಶ್ವಾಸನೆ ನೀಡಿದಂತೆ ನಡೆದುಕೊಳ್ಳುತ್ತಿಲ್ಲವೆಂದು ವಿರೋಧ ಪಕ್ಷಗಳ ಸದಸ್ಯರು ಜಯಚಂದ್ರ ಅವರ ವಿರುದ್ಧ ಹರಿಹಾಯ್ದಿದ್ದರಿಂದ ಸಚಿವರು ನಾವು ನುಡಿದಂತೆ ನಡೆದುಕೊಳ್ಳುತ್ತೇವೆ. ಆದರೆ, ವರದಿಯನ್ನು ಮಂಡಿಸಲು ಸಮಯಾವಕಾಶ ಬೇಕಾಗಿರುವುದರಿಂದ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಹೇಳಿದರು.