ರಾಷ್ಟ್ರೀಯ ಪಕ್ಷಗಳಿಂದ ಸುಳ್ಳು ಭರವಸೆ: ರೇವಣ್ಣ
ಹಾಸನ, ಜ.7: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 1994ರ ಫಲಿತಾಂಶ ಪುನರಾವರ್ತನೆ ಆಗಲಿದೆ. ಎರಡು ರಾಷ್ಟ್ರೀಯ ಪಕ್ಷಗಳು ಕೇವಲ ಸುಳ್ಳು ಭರವಸೆಯಲ್ಲಿ ಕಾಲಕಳೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 25 ಸ್ಥಾನವನ್ನು ಗಳಿಸುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಟೀಕಿಸುತ್ತಿವೆ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ 1994ರ ಫಲಿತಾಂಶ ಮತ್ತೆ ಮರುಕಳಿಸಲಿದೆ ಎಂದು ಭವಿಷ್ಯ ನುಡಿದರು.
ಎತ್ತಿನಹೊಳೆ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನೀರಿನ ವಿಚಾರದಲ್ಲಿ ಅವರು ಎಂದು ವಿರೋಧಿಸಿಲ್ಲ. ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾಮಗಾರಿಯಲ್ಲಿ ಏನಾದರೂ ಅಕ್ರಮ ನಡೆಯುವುದು ಕಂಡು ಬಂದರೆ ಸಾರ್ವಜನಿಕರ ಹಣವನ್ನು ದುರುಪಯೋಗವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ ಅಷ್ಟೆ. ಇದನ್ನು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಅವರು ತಮ್ಮ ಸರಕಾರದ ಸಾಧನಾ ಸಮಾವೇಶದಲ್ಲಿ ಅಪಪ್ರಚಾರ ಮಾಡುವುದು ಸೂಕ್ತವಲ್ಲ ಎಂದರು.
ಇದೆ ವೇಳೆ ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಉಪಸ್ಥಿತರಿದ್ದರು.