ಬ್ಯಾರೀಸ್ ಗ್ರೂಪ್ ನಿರ್ಮಿಸಿದ ನೆಟ್ ಮ್ಯಾಜಿಕ್/ ಎನ್ ಟಿಟಿ ಡಾಟಾ ಸೆಂಟರ್ ಗೆ ಐಜಿಬಿಸಿ ಪ್ಲಾಟಿನಂ ದೃಢೀಕರಣ
ಬೆಂಗಳೂರು,ಜು. 28: ಬ್ಯಾರೀಸ್ ಗ್ರೂಪ್ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಡಾಟಾ ಸೆಂಟರ್ ಕಟ್ಟಡ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್( IGBC ) ನಿಂದ ಪರಿಸರ ಸ್ನೇಹಿ ಕಟ್ಟಡಗಳಿಗೆ ನೀಡಲಾಗುವ ಅತ್ಯುನ್ನತ ಪ್ಲಾಟಿನಂ ದೃಢೀಕರಣಕ್ಕೆ ಪಾತ್ರವಾಗಿದೆ. ಜಪಾನ್ ನ ಎನ್ ಟಿಟಿ ಹಾಗು ನೆಟ್ ಮ್ಯಾಜಿಕ್ ಸಂಸ್ಥೆಗಳಿಗಾಗಿ ಬ್ಯಾರೀಸ್ ಗ್ರೂಪ್ ಈ ಅತ್ಯಾಧುನಿಕ ವಿನ್ಯಾಸದ ಕಟ್ಟಡ ನಿರ್ಮಿಸಿದೆ.
ಇದರೊಂದಿಗೆ, ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್ ನಿರ್ಮಿಸಿರುವ ಪ್ರತಿಷ್ಠಿತ ಬ್ಯಾರೀಸ್ ಗ್ಲೋಬಲ್ ರಿಸರ್ಚ್ ಟ್ರಯಾಂಗಲ್ ಸಹಿತ ಒಟ್ಟು ಆರು ಯೋಜನೆಗಳಿಗೆ ಐಜಿಬಿಸಿ ನೀಡುವ ಹಸಿರು ನಿರ್ಮಾಣದ ಅತ್ಯುನ್ನತ ದೃಢೀಕರಣ ಸಿಕ್ಕಿದಂತಾಗಿದೆ.
ಶುಕ್ರವಾರ ಬೆಂಗಳೂರಿನ ಶೆರಟನ್ ಗ್ರಾಂಡ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಐಜಿಬಿಸಿ ಪ್ಲಾಟಿನಂ ದೃಢೀಕರಣದ ಪ್ರಮಾಣಪತ್ರ ಹಾಗು ಸ್ಮರಣಿಕೆಯನ್ನು ಹಸ್ತಾಂತರಿಸಲಾಯಿತು. ಎನ್ ಟಿಟಿ ಜಪಾನ್ ನ ಗ್ಲೋಬಲ್ ಬಿಸಿನೆಸ್ ಹೆಡ್ ಟಕನೊಬು ಮಯೆದ, ನೆಟ್ ಮ್ಯಾಜಿಕ್ ನ ಆಡಳಿತ ನಿರ್ದೇಶಕ ಶರದ್ ಸಂಘಿ, ಅಧ್ಯಕ್ಷ ಸುನಿಲ್ ಗುಪ್ತಾ ,ಸಿಐಐ - ಐಜಿಬಿಸಿ ಸಂಸ್ಥೆಯ ಪಾಲಿಸಿ ಎಂಡ್ ಎಡ್ವೊಕೆಸಿ ವಿಭಾಗದ ಅಧ್ಯಕ್ಷ ವಿ.ಸುರೇಶ್ , ಐಜಿಬಿಸಿ ಬೆಂಗಳೂರು ಘಟಕದ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು. ಬಳಿಕ ನಡೆದ ಸಂವಾದ ಹಾಗು ಚರ್ಚೆಯಲ್ಲಿ ಭಾರತ ಹಾಗು ಜಪಾನ್ ನ ಉದ್ಯಮ ರಂಗದ ಸುಮಾರು 300 ಗಣ್ಯರು ಭಾಗವಹಿಸಿದ್ದರು.