ಹರಪನಹಳ್ಳಿ: ಬಾಲಕಿಯ ಅತ್ಯಾಚಾರ ಆರೋಪ; ಸಂಬಂಧಿ ಯುವಕನ ಬಂಧನ
ಹರಪನಹಳ್ಳಿ, ಆ.7: ಬಾಲಕಿ ಮೇಲೆ ಪಕ್ಕದ ಮನೆಯ ಸಂಬಂಧಿ ಯುವಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ತಾಂಡದ ಲಕ್ಷ್ಮಣ (30) ಬಂಧನಕ್ಕೊಳಗಾದ ಆರೋಪಿ. ಸಂತ್ರಸ್ತ ಬಾಲಕಿ, ಈಕೆಯ ತಂದೆ, ತಾಯಿ ಕಳೆದ 4 ವರ್ಷ ಗಳಿಂದ ಎನ್.ಆರ್. ಪುರ ತಾಲೂಕಿನ ಗುಡ್ಡಿಹಳ್ಳಿ ಗ್ರಾಮದ ಬಳಿಯ ಕಾಫಿ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಲಕ್ಷ್ಮಣ ಸಂತ್ರಸ್ತೆಯ ಮನೆಯಲ್ಲಿಯೇ ವಾಸವಿದ್ದು, ಆಕೆಯ ಪೋಷಕರೊಂದಿಗೆ ಕೆಲಸಮಾಡುತ್ತಿದ್ದ. ಕಳೆದ 6-7 ತಿಂಗಳ ಹಿಂದೆ ಸಂತ್ರಸ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಲಕ್ಷ್ಮಣ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಕಳೆದ ಜು.22ರಂದು ಎಲ್ಲರೂ ಕಾಪಿ ಎಸ್ಟೇಟ್ನಿಂದ ಹರಪನಹಳ್ಳಿ ತಾಲೂಕು ಕಂಡಿಕೇರಿ ತಾಂಡದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು. ಬಳಿಕ ಜು. 25ರಂದು ಆರೋಪಿ ಲಕ್ಷ್ಮಣ ಬಾಲಕಿಯನ್ನು ಕರೆದುಕೊಂಡು ತಾಂಡದಿಂದ ಪರಾರಿಯಾಗಿದ್ದ.
ಈ ಸಂಬಂಧ ಬಾಲಕಿಯ ಪೋಷಕರು ಹಲುವಾಗಲು ಪೊಲೀಸ್ ಠಾಣೆಗೆ ಅಪಹರಣ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ.7ರಂದು ಮಂಗಳವಾರ ಬೆಳಗ್ಗೆ ಬಾಲಕಿ ಹಾಗೂ ಲಕ್ಷ್ಮಣ ಇಬ್ಬರನ್ನೂ ದಾವಣಗೆರೆಯಲ್ಲಿ ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಲಕ್ಷ್ಮಣ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂಬ ಸಂಶಯವಿದ್ದು, ವೈದ್ಯಕೀಯ ತಪಾಸಣೆ ನಂತರ ನಿಜಾಂಶ ತಿಳಿಯಲಿದೆ. ಬಾಲಕಿಯ ತಂದೆಯ ದೂರಿನ ಮೇರೆಗೆ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಲಕ್ಷ್ಮಣನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.