ಹುಳಿಯಾರು: ಮನೆಯ ಗೋಡೆ ಕುಸಿದು ಮಗು ಸಾವು
ಹುಳಿಯಾರು,ಆ.14: ಆಟವಾಡುತ್ತಿದ್ದ ಮಗುವಿನ ಮೇಲೆ ಹಳೆಯ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಪ್ರಣತಿ ಎಂಬ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುವನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ ಮಗು ಪ್ರಣತಿ(03) ರಂಗರಾಜು-ಪಾರ್ವತಮ್ಮ ದಂಪತಿಯ ಪುತ್ರಿಯಾಗಿದ್ದು, ಈಕೆ ಇನ್ನಿಬ್ಬರು ಮಕ್ಕಳ ಜೊತೆ ಮನೆಯ ಎದುರು ಆಟವಾಡುತ್ತಿದ್ದಾಗ ದೇವರಾಜು ಎಂಬವರಿಗೆ ಸೇರಿದ ಹಳೆಯ ಮನೆಯ ಇಪ್ಪತ್ತು ಅಡಿ ಎತ್ತರದ ಗೋಡೆ ಕುಸಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದೆರಡು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ಈ ಕಾರಣದಿಂದ ಗೋಡೆ ನೆನೆದು ಕುಸಿದಿದೆ ಎನ್ನಲಾಗಿದೆ.
ಮಗುವಿನ ಸಾವಿನ ಸುದ್ಧಿ ಕೇಳಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story