ರಾಹುಲ್ ಭೇಟಿ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ನಿರ್ಧಾರ
ಬೆಂಗಳೂರು, ಅ.13: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ನಿರ್ಧಾರ ಕೈಗೊಂಡಿದ್ದಾರೆ.
ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆಗೆ ನಾನಾ ಸವಾಲು ಎದುರಾಗಿದೆ. ಉಭಯ ಪಕ್ಷಗಳಿಂದಲೂ ಒಮ್ಮತದ ಆಯ್ಕೆ ಈ ವರೆಗೆ ಸಾಧ್ಯವಾಗಿಲ್ಲ. ಎರಡೂ ಪಕ್ಷಗಳಿಂದಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬೆಳಗ್ಗೆ 11:00 ಗಂಟೆಗೆ ಕಾಂಗ್ರೆಸ್ ಸಚಿವರ ಮತ್ತು ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.