ಆಕಸ್ಮಿಕ ಬೆಂಕಿ : ಎರಡು ಮನೆಗಳು ಭಸ್ಮ, ಅಪಾರ ಹಾನಿ
ಹನೂರು, ಫೆ.12: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ಮನೆಗಳು ಸುಟ್ಟು ಭಸ್ಮವಾದ ಘಟನೆ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಬ್ದುಲ್ ರಿಯಾಝ್ ಹಾಗೂ ಅಬ್ದುಲ್ ಮುನಾಫ್ ಎಂಬವವರಿಗೆ ಸೇರಿದ ಮನೆಗಳು ಭಸ್ಮವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕುಟುಂಬ ಸದಸ್ಯರು ನಿದ್ರಾವಸ್ಥೆಯಲ್ಲಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚರಗೊಂಡಿದ್ದಾರೆ. ಬಳಿಕ ಗ್ರಾಮದ ನೆರೆಹೊರೆಯವರ ಸಹಾಯದಿಂದ ಅಪಾಯದಿಂದ ಪಾರಾಗಿದ್ದಾರೆ.
ಅವಘಡದಲ್ಲಿ ಬೆಲೆಬಾಳುವ ಪೀಠೋಪಕರಣಗಳು, ಮೇಲ್ಛಾವಣಿಯ ಮರದ ಭಾರಿ ಗಾತ್ರದ ಜಂತಿಗಳು, ಹಲಗೆ ಹಾಗೂ ಪಟ್ಟಿಗಳು ನಾಶವಾಗಿವೆ. ರಾಗಿ ಸೇರಿದಂತೆ ವಿವಿಧ ರೀತಿಯ ದವಸ ಧಾನ್ಯಗಳು, ಮಕ್ಕಳ ಪುಸ್ತಕಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಸಾಮಗ್ರಿಗಳು ನಾಶವಾಗಿವೆ.
ಘಟನಾ ಸ್ಥಳಕ್ಕೆ ವಿಶೇಷ ತಹಶೀಲ್ದಾರ್ ಶಿವರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸೂಕ್ತ ಪರಿಹಾರ ಕೊಡಿಸುವಂತೆ ದುರ್ಘಟನೆಯಲ್ಲಿ ನಷ್ಟ ಅನುಭವಿಸಿದ ಕುಟುಂಬಸ್ಥರು ಮನವಿ ಮಾಡಿಕೊಂಡರು.