ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ: 16ನೇ ಸ್ಥಾನಕ್ಕೇರಿದ ಕೊಪ್ಪಳ
617 ಅಂಕ ಪಡೆದ ಸಮೀವುದೀನ್ ಜಿಲ್ಲೆಗೆ ಪ್ರಥಮ
ಕೊಪ್ಪಳ,ಮೇ 2: 2019ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಗೆ ಶೇ 80.45 ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ 16ನೇ ಸ್ಥಾನವನ್ನು ಪಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಮಿತ ಯರಗೋಲ್ಕರ್ ತಿಳಿಸಿದ್ದಾರೆ.
ಮಾಧ್ಯಮ ವಿವರದನ್ವಯ ಕನ್ನಡ ಮಾಧ್ಯಮದ 14,761 ವಿದ್ಯಾರ್ಥಿಗಳಲ್ಲಿ 11,668 ಉತ್ತೀರ್ಣರಾಗಿದ್ದು, ಶೇ.79.05 ರಷ್ಟು, ಇಂಗ್ಲೀಷ್ ಮಾಧ್ಯಮ 3136 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 2,940 ಉತ್ತೀರ್ಣರಾಗಿ ಶೇ.93.75 ರಷ್ಟು, ಉರ್ದು ಮಾಧ್ಯಮ 267 ರಲ್ಲಿ 169 ಉತ್ತೀರ್ಣರಾಗಿ ಶೇ.63.3 ರಷ್ಟು, ತೆಲುಗು 49 ರಲ್ಲಿ 42 ಉತ್ತೀರ್ಣರಾಗಿ ಶೇ.85.71 ರಷ್ಟು, ಎಲ್ಲಾ ಮಾಧ್ಯಮ ಸೇರಿ 18,216 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 14819 ಉತ್ತೀರ್ಣರಾಗಿ ಶೇ. 80.4525 ರಷ್ಟು ಫಲಿತಾಂಶ ಬಂದಿದೆ.
ತಾಲೂಕುವಾರು ವಿವರದನ್ವಯ ಸರ್ಕಾರಿ 20, ಅನುದಾನಿತ 1 ಹಾಗೂ ಅನುದಾನರಹಿತ ಖಾಸಗಿ 15 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಅನುದಾನರಹಿತ ಒಂದು ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಟ್ಯಾಪ್ 10 ವಿದ್ಯಾರ್ಥಿಗಳ ವಿವರದನ್ವಯ ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಎಂ.ಡಿ. ಸಮೀವುದ್ದೀನ್ ಅಹ್ಮದ್ 625 ಕ್ಕೆ 617 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಗಂಗಾವತಿಯ ಲಿಟ್ಲ್ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೇಧರ ಭಂಡಾರಕರ್ 616 ಅಂಕ, ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸ್ನೇಹಾ ಉಪ್ಪಿನ 616 ಅಂಕ, ಕಾರಟಗಿಯ ಗ್ರೀನ್ವೆಲ್ಲೀ ರೂರಲ್ ಹೈಸ್ಕೂಲ್ನ ಬಿ. ಕೀರ್ತಿ 616 ಅಂಕ, ಕೊಪ್ಪಳದ ಶ್ರೀ ಶಿವಶಾಂತವೀರ ಇಂಗ್ಲೀಷ್ ಮಿಡಿಂ ಹೈಸ್ಕೂಲ್ನ ನವೀನ 616 , ಕುಷ್ಟಗಿ ತಾಲೂಕಿನ ಜಹಗೀರಗುಡದೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಾವ್ಯ ಹಿರೇಮಠ 615, ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೆ.ಎಂ. ಭರತ್ 615 ಅಂಕ, ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೀಹರಿ ಭಟ್ 614 ಅಂಕ, ಗಂಗಾವತಿಯ ಶ್ರೀ ಕೆ.ವಿ.ಎಸ್. ಕನ್ನಡ ಮಾಧ್ಯಮ ಪ್ರೌಢ ಶಾಲೆ ಮಲ್ಲಿಕಾರ್ಜುನ 613 ಅಂಕ ಹಾಗೂ ಮುನಿರಾಬಾದ್ ಗ್ರಾಮದ ಶಕ್ಷಾಯತನ್ ಇಂಗ್ಲೀ ಮೀಡಿಯಂ ಹೈಸ್ಕೂಲ್ನ ವಿದ್ಯಾರ್ಥಿ ದಿಲೀಪ್ ಸಿಂಗ್ ಬಿಸ್ತ್ 612 ಅಂಕ ಪಡೆದಿದ್ದಾರೆ.
ಕಳೆದ 2017-2018 ನೇ ಸಾಲಿನಲ್ಲಿ ಶೇ 80.43 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 19 ನೇ ಸ್ಥಾನ ಪಡೆದಿತ್ತು. ಈ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಮೂರು ಸ್ಥಾನ ಮುಂದೆ ಬಂದಿದ್ದು ಇನ್ನಷ್ಟು ಸುಧಾರಣೆಯನ್ನು ಕಂಡಿದೆ. 2016-17 ರಲ್ಲಿ 76.05 ಫಲಿತಾಂಶ ಪಡೆದು 11, 2015-16 ರಲ್ಲಿ ಶೇ 75.93 ರಷ್ಟು ಫಲಿತಾಂಶ ಪಡೆದು 25 ನೇ ಸ್ಥಾನದಲ್ಲಿತ್ತು.
2019 ನೇ ಸಾಲಿಗೆ 11,084 ಬಾಲಕರು ಹಾಗೂ 9,516 ಬಾಲಕಿಯರು ಸೇರಿ ಒಟ್ಟು 20,600 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 171 ಸರ್ಕಾರಿ ಪ್ರೌಢಶಾಲೆ, ಅನುದಾನಿತ 23 ಹಾಗೂ ಅನುದಾನ ರಹಿತ 88 ಶಾಲೆಗಳು ಸೇರಿದಂತೆ ಒಟ್ಟು 282 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 61 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.