ರಸ್ತೆ ಅಪಘಾತಕ್ಕೆ ಮಹಿಳೆ ಬಲಿ
ಶಿವಮೊಗ್ಗ, ಆ. 5: ಚಾಲಕನ ನಿಯಂತ್ರಣ ಕಳೆದುಕೊಂಡು ಮೊಪೆಡ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ವಿನೋಬನಗರದ 100 ಅಡಿ ರಸ್ತೆಯಲ್ಲಿ ನಡೆದಿದೆ.
ಗೋಪಾಳದ ನಿವಾಸಿ ಸಾವಿತ್ರಮ್ಮ (62) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಸಂಬಂಧಿ ರವಿ ಎಂಬುವರು ಚಲಾಯಿಸುತ್ತಿದ್ದ ಹೊಂಡಾ ಆಕ್ಟೀವಾ ಮೊಪೆಡ್ನಲ್ಲಿ ಮನೆಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಅವಘಡದಲ್ಲಿ ಸಾವಿತ್ರಮ್ಮರವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದು, ತಕ್ಷಣವೇ ಅವರನ್ನು ಸಾರ್ವಜನಿಕರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಸಾವಿತ್ರಮ್ಮ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story