ಫ್ಲೆಕ್ಸ್ ನಲ್ಲಿ ಉಮಾಶ್ರೀ ಭಾವಚಿತ್ರ: ಅಧಿಕಾರಿಗಳನ್ನು ತರಾಟೆಗೆ ತೆಗೆದ ಸಚಿವ ವಿ.ಸೋಮಣ್ಣ
ಮೈಸೂರು,ಸೆ.30: ಮಹಿಳಾ ದಸರಾ ಸ್ವಾಗತ ಕೋರುವ ಫ್ಲೆಕ್ಸ್ ನಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರ ಭಾವಚಿತ್ರವಿದ್ದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಹಿಳಾ ದಸರಾಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ನ್ನು ದಸರಾ ಉಪಸಮಿತಿ ಅಧಿಕಾರಿಗಳು ಹಾಕಿದ್ದರಾದರೂ, ಫ್ಲೆಕ್ಸ್ ಹಳೆಯದೇ ಆಗಿದ್ದರಿಂದ ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ಸಚಿವೆ ಉಮಾಶ್ರೀ ಅವರ ಫೋಟೋ ಇತ್ತು. ಅದನ್ನು ನೋಡಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಗಲಾಟೆ ಮಾಡಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಫೋಟೋ ಇರುವ ಫ್ಲೆಕ್ಸ್ ಅನ್ನು ಹಾಕುವ ಬದಲು ಮಾಜಿ ಸಚಿವೆ ಉಮಾಶ್ರೀ ಭಾವಚಿತ್ರ ಇರುವ ಹಳೇ ಫ್ಲೆಕ್ಸ್ ಅನ್ನೇ ಅಧಿಕಾರಿಗಳು ಹಾಕಿದ್ದಕ್ಕೆ ಸಚಿವ ವಿ.ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ನಾವೇನು ನಿಮಗೆ ಕಡಿಮೆ ಮಾಡಿದ್ದೇವೆ. ಹಣಕಾಸಿನಲ್ಲಿ ಕೊರತೆಯಿಂದ ಹಳೆಯ ಸ್ವಾಗತ ಕಾಮಾನು ಮಾಡಿದ್ದೀರಾ ? ಇನ್ನು ಅರ್ಧ ಗಂಟೆಯಲ್ಲಿ ಕಮಾನು ಬದಲಾಗಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.