ರಸ್ತೆ ಅಪಘಾತ: 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪು' ವಿಜೇತೆ ಮೆಬಿನಾ ಮೈಕಲ್ ಸಾವು
ನಾಗಮಂಗಲ, ಮೇ.27: ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪು' ಸೀಸನ್ 4 ರ ವಿಜೇತೆ ಮೆಬಿನಾ ಮೈಕಲ್( 22) ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ದೇವಿಹಳ್ಳಿ ಬಳಿ ನಡೆದಿದೆ.
ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಮಂಗಳವಾರ ರಾತ್ರಿ ರಸ್ತೆ ಅಪಘಾತ ಸಂಭವಿಸಿದೆ. ಮಡಿಕೇರಿ ಮೂಲದ ಮೆಬಿನಾ ತನ್ನಿಬ್ಬರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಸೋಮವಾರಪೇಟೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಹಿರಿಸಾವೆ ಟೋಲ್ ಕಡೆಯಿಂದ ಸ್ವಗ್ರಾಮಕ್ಕೆ ತೆರಳಲು ಹೆದ್ದಾರಿ ದಾಟಲು ತಿರುವು ತೆಗೆದುಕೊಂಡ ಟ್ರ್ಯಾಕ್ಟರ್ ಗೆ ಅತೀವೇಗವಾಗಿ ಸಂಚರಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ತೀವ್ರ ಗಾಯಗೊಂಡಿದ್ದ ಮೆಬಿನಾ ಮತ್ತು ಸ್ನೇಹಿತರಾದ ವಿನೋದ್ ಮತ್ತು ಚಾಲಕ ರಾಜುರವರನ್ನು ಸ್ಥಳೀಯ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಗಾಯಾಳುಗಳನ್ನು ರವಾನಿಸುವಾಗ ದಾರಿ ಮಧ್ಯೆ ಮೆಬಿನಾ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥೀತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ
ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಟ್ರ್ಯಾಕ್ಟರ್ ಸಹ ಜಖಂ ಆಗಿದೆ. ಮೃತದೇಹವನ್ನು ಏಮ್ಸ್ ಆಸ್ಪತ್ರೆಯ ಶವಗಾರದಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಸಂಬಂದ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.