ಕಂಬಕ್ಕೆ ಢಿಕ್ಕಿ ಹೊಡೆದು ಕಾರು ಪಲ್ಟಿ: ಬೆಂಗಳೂರು ಮೂಲದ ಇಬ್ಬರು ಮೃತ್ಯು
ಮೂವರಿಗೆ ಗಂಭೀರ ಗಾಯ
ಚಿಕ್ಕಮಗಳೂರು, ಜೂ.27: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕರ್ತಿಕೆರೆ ಗ್ರಾಮದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ಬೆಂಗಳೂರು ಮೂಲದ ಮಂಜುನಾಥ್, ಮುತ್ತುರಾಜ್, ಜೀವನ್, ಸಿದ್ಧರಾಜುಮ ಅಭಿಷೇಕ್ ಅವರು ಹಾಸನ, ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಶುಕ್ರವಾರ ತಡರಾತ್ರಿ ಕರ್ತಿಕೆರೆ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.
ಘಟನೆಯಲ್ಲಿ ಬೆಂಗಳೂರಿನ ಮಂಜುನಾಥ್ (30) ಹಾಗೂ ಮುತ್ತುರಾಜ್ (28) ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕಾರಿನಲ್ಲಿದ್ದ ಜೀವನ್, ಸಿದ್ಧರಾಜು, ಅಭಿಷೇಕ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಮಲ್ಲೇಗೌಡ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅತಿವೇಗದ ಚಾಲನೆಯಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.