ಕೋರ್ಟ್ ಆವರಣದಲ್ಲಿ ಮೊಬೈಲ್ ಬಳಕೆ: ಪುರಸಭೆ ಅಧ್ಯಕ್ಷೆಗೆ ದಂಡ!
ಹುಬ್ಬಳ್ಳಿ, ಆ.17: ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡದ ನವಲಗುಂದ ಪುರಸಭೆ ಅಧ್ಯಕ್ಷೆ ಅನಸೂಯಾ ಭೂವಿ ಅವರಿಗೆ ನವಲಗುಂದ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರು ದಂಡ ವಿಧಿಸಿ ಆದೇಶ ನೀಡಿದರು.
ಗುರುವಾರ ನ್ಯಾಯಾಲಯದಲ್ಲಿ ರಕ್ತದಾನ ಶಿಬಿರ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅನಸೂಯಾ ಭೂವಿ ಮೊಬೈಲ್ ಸ್ವಿಚ್ ಆಫ್ ಮಾಡಿರಲಿಲ್ಲ. ಈ ಹಿನ್ನೆಲೆ ಸ್ಥಳದಲ್ಲಿಯೇ 100 ರೂ. ದಂಡ ಹಾಕಿ, ನ್ಯಾಯಾಲಯದ ಆವರಣದಲ್ಲಿ ಮೊಬೈಲ್ ಬಳಸದಂತೆ ನ್ಯಾಯಾಧೀಶ ಸಂದೀಪ ಸಾಲಿಯಾನ ಆದೇಶ ನೀಡಿದರು.
ನ್ಯಾಯಾಲಯದಲ್ಲಿ ನಡೆಯುವ ಸಭೆ, ಸಮಾರಂಭ ಹಾಗೂ ಕಲಾಪಗಳ ವೇಳೆ ಮೊಬೈಲ್ ಬಳಸಬಾರದು ಎಂಬ ನಿಯಮವಿದೆ. ಈ ನಿಯಮ ಉಲ್ಲಂಘನೆ ಮಾಡಿ ಮೊಬೈಲ್ ಬಳಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ದಿನವೇ ಪ್ರಥಮ ಪ್ರಜೆಯೊಬ್ಬರು ದಂಡಕ್ಕೊಳಗಾಗಿದ್ದು ವಿಶೇಷವಾಗಿದೆ.
ಇದೇ ವೇಳೆ ಮೊಬೈಲ್ ಫೋನ್ ರಿಂಗಣಿಸಿದ ಪೊಲೀಸ್ ಪೇದೆಗೂ ನ್ಯಾಯಾಧೀಶರು ದಂಡ ವಿಧಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
Next Story