ಲಾಯ್ಡ್ ಪೋಪ್ ಶ್ರೇಷ್ಠ ಬೌಲಿಂಗ್: ಆಸೀಸ್ ಸೆಮಿ ಫೈನಲ್ಗೆ
ಅಂಡರ್-19 ಕ್ರಿಕೆಟ್ ವಿಶ್ವಕಪ್
ವೆಲ್ಲಿಂಗ್ಟನ್, ಜ.23: ಲೆಗ್-ಸ್ಪಿನ್ನರ್ ಲಾಯ್ಡಿ ಪೋಪ್(8-35) ಅತ್ಯುತ್ತಮ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ ಅಂಡರ್-19 ಕ್ರಿಕೆಟ್ ವಿಶ್ವಕಪ್ನಲ್ಲಿ ಇಂಗ್ಲೆಂಡ್ನ್ನು ಮಣಿಸುವ ಮೂಲಕ ಸೆಮಿಫೈನಲ್ಗೆ ತಲುಪಿದೆ.
ಮಂಗಳವಾರ ಇಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 127 ರನ್ಗೆ ಆಲೌಟಾಗಿತ್ತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಇಂಗ್ಲೆಂಡ್ 8 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿ ಗೆಲುವಿನ ವಿಶ್ವಾಸದಲ್ಲಿತ್ತು. ಆಗ ದಾಳಿಗೆ ಇಳಿದ 18ರ ಹರೆಯದ ಪೋಪ್ 35 ರನ್ಗೆ ಇಂಗ್ಲೆಂಡ್ನ 8 ವಿಕೆಟ್ಗಳನ್ನು ಉಡಾಯಿಸಿ ಪಂದ್ಯದ ಚಿತ್ರಣವನ್ನು ಬದಲಿಸಿದರು.
ಇಂಗ್ಲೆಂಡ್ 49 ರನ್ ಗಳಿಸುವಷ್ಟರಲ್ಲಿ 10 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 96 ರನ್ಗೆ ಆಲೌಟಾಯಿತು. ಇದರಲ್ಲಿ 8 ವಿಕೆಟ್ಗಳು ಪೋಪ್ ಪಾಲಾದವು. ಪೋಪ್ ಅಂಡರ್-19 ವಿಶ್ವಕಪ್ ಚರಿತ್ರೆಯಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದರು. ಆಸ್ಟ್ರೇಲಿಯದಲ್ಲಿ ಕ್ರಿಕೆಟ್ ವಿಶ್ಲೇಷಕರು ಪೋಪ್ರನ್ನು ಸ್ಪಿನ್ ದಂತಕತೆ ಶೇನ್ ವಾರ್ನ್ಗೆ ಹೋಲಿಕೆ ಮಾಡಲಾರಂಭಿಸಿದ್ದಾರೆ.
‘‘ಹೊಸ ಶೇನ್ ವಾರ್ನ್ ಉದಯಿಸಿದ್ದಾನೆ’’ ಎಂದು ಪೋಪ್ ಅವರ ತವರುಪಟ್ಟಣದ ಪತ್ರಿಕೆ ತನ್ನ ವೆಬ್ಸೈಟ್ನಲ್ಲಿ ಬರೆದಿದೆ.
ವಾರ್ನ್ ತನ್ನ 15 ವರ್ಷಗಳ ವೃತ್ತಿಜೀವನದಲ್ಲಿ 708ವಿಕೆಟ್ಗಳನ್ನು ಪಡೆದಿದ್ದು, ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದರು.