ಹಾಂಕಾಂಗ್ ವಿರುದ್ಧ ಭಾರತಕ್ಕೆ ಜಯ
ಅಂಕಿತಾ ರೈನಾ, ಕರ್ಮನ್ ಕೌರ್ ಗೆ ಗೆಲುವು
ಹೊಸದಿಲ್ಲಿ, ಫೆ.9: ಫೆಡ್ಕಪ್ ಟೆನಿಸ್ ಟೂರ್ನಿಯಲ್ಲಿ ಅಂಕಿತಾ ರೈನಾ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ ಕರ್ಮನ್ ಕೌರ್ ಮೊದಲ ಜಯ ದಾಖಲಿಸಿ ಸೋಲಿನಿಂದ ಹೊರ ಬಂದರು. ಇಲ್ಲಿ ಶುಕ್ರವಾರ ನಡೆದ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆೆ. ಏಷ್ಯಾ-ಒಶಿಯಾನಿಯಾ ಗ್ರೂಪ್-1 ಪಂದ್ಯದಲ್ಲಿ ಎಡುಸ್ ಚೊಂಗ್ರನ್ನು 6-3, 6-4 ರಿಂದ ಸೋಲಿಸಿರುವ ಕರ್ಮನ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಡಬ್ಲುಟಿಎ ರ್ಯಾಂಕಿಂಗ್ನಲ್ಲಿ 761ನೇ ರ್ಯಾಂಕಿನಲ್ಲಿರುವ ಕರ್ಮನ್ ಸರಿಯಾಗಿ ಒಂದು ವರ್ಷದ ಹಿಂದೆ ಕಝಕಿಸ್ತಾನದಲ್ಲಿ ನಡೆದ ಫೆಡ್ ಕಪ್ನಲ್ಲಿ ಕೊನೆಯ ಬಾರಿ ಜಯ ಸಾಧಿಸಿದ್ದಾರೆ.
ಟೂರ್ನಿಯಲ್ಲಿ ಚೀನಾ ಹಾಗೂ ಕಝಕಿಸ್ತಾನದ ಗರಿಷ್ಠ ರ್ಯಾಂಕಿನ ಆಟಗಾರರ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಅಂಕಿತಾ ಅವರು ಶುಕ್ರವಾರ ಹಾಂಕಾಂಗ್ನ ಲಿಂಗ್ ಝಾಂಗ್ರನ್ನು 6-3, 6-2 ಸೆಟ್ಗಳ ಅಂತರದಿಂದ ಸೋಲಿಸಿದರು. ‘ಎ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿರುವ ಭಾರತ ಶನಿವಾರ ನಡೆಯಲಿರುವ ಪ್ಲೇ-ಆಫ್ ಪಂದ್ಯದಲ್ಲಿ ‘ಬಿ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ.