ಪುರುಷರ ಹಾಕಿ: ಇಂಗ್ಲೆಂಡ್ಗೆ ಶಾಕ್ ನೀಡಿದ ಭಾರತ
ಗೋಲ್ಡ್ಕೋಸ್ಟ್, ಎ.11: ಕೊನೆಯ ಎರಡು ನಿಮಿಷಗಳಲ್ಲಿ ಎರಡು ಗೋಲು ಬಾರಿಸಿ ತಿರುಗೇಟು ನೀಡಿದ ಭಾರತದ ಪುರುಷರ ಹಾಕಿ ತಂಡ ಇಂಗ್ಲೆಂಡ್ ವಿರುದ್ಧ ಬುಧವಾರ ಇಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ 4-3 ಅಂತರದಿಂದ ರೋಚಕ ಜಯ ಸಾಧಿಸಿದೆ.
ಈಗಾಗಲೇ ಸೆಮಿಫೈನಲ್ಗೆ ತೇರ್ಗಡೆಯಾಗಿರುವ ಭಾರತಕ್ಕೆ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಲು ಇಂದಿನ ಪಂದ್ಯ ಗೆಲ್ಲಬೇಕಾಗಿತ್ತು. ಭಾರತ ಪಂದ್ಯದ ಅಂತ್ಯದ ತನಕವೂ 2-3 ಹಿನ್ನಡೆಯಲ್ಲಿತ್ತು. ವರುಣ್ ಕುಮಾರ್ ಹಾಗೂ ಮನ್ದೀಪ್ ಸಿಂಗ್ ತಲಾ ಗೋಲು ಬಾರಿಸಿ ಭಾರತಕ್ಕೆ 4-3 ಅಂತರದ ಗೆಲುವು ತಂದುಕೊಟ್ಟಿದ್ದಾರೆ.
ಭಾರತದ ಪರ ಮನ್ಪ್ರೀತ್ ಸಿಂಗ್(32ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್(51ನೇ ನಿಮಿಷ), ವರುಣ್ ಕುಮಾರ್(58ನೇ ನಿ.) ಹಾಗೂ ಮನ್ದೀಪ್ ಸಿಂಗ್(59ನೇ ನಿಮಿಷ)ತಲಾ ಒಂದು ಗೋಲು ಬಾರಿಸಿದರು. ಇಂಗ್ಲೆಂಡ್ನ ಪರ ಡೇವಿಡ್ ಕಾಂಡನ್(17ನೇ ನಿಮಿಷ), ಲಿಯಾಮ್ ಅನ್ಸೆಲ್(52ನೇ ನಿ.) ಹಾಗೂ ಸ್ಯಾಮ್ ವಾರ್ಡ್(56ನೇ ನಿ.) ತಲಾ ಒಂದು ಗೋಲು ಬಾರಿಸಿದ್ದಾರೆ.
‘ಬಿ’ ಗುಂಪಿನಲ್ಲಿ ಒಟ್ಟು 10 ಅಂಕ ಪಡೆದು ಅಗ್ರ ಸ್ಥಾನ ಪಡೆದಿರುವ ಭಾರತ ಸೆಮಿ ಫೈನಲ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಿದರೆ, ಇಂಗ್ಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ. ಇಂಗ್ಲೆಂಡ್ ಎರಡನೇ ಕ್ವಾರ್ಟರ್ನಲ್ಲಿ 1-0 ಮುನ್ನಡೆ ಸಾಧಿಸಿತು. 3ನೇ ಕ್ವಾರ್ಟರ್ನಲ್ಲಿ ಗೋಲು ಬಾರಿಸಿದ ನಾಯಕ ಮನ್ಪ್ರೀತ್ ಸಿಂಗ್ 1-1 ರಿಂದ ಸಮಬಲಗೊಳಿಸಿದರು. 4ನೇ ಕ್ವಾರ್ಟರ್ನಲ್ಲಿ ಡಿಫೆಂಡರ್ ರೂಪಿಂದರ್ ಪಾಲ್ ಸಿಂಗ್ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಲಿಯಾಮ್ ಅನ್ಸೆಲ್ ಹಾಗೂ ಸ್ಯಾಮ್ ವಾರ್ಡ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್ ಸಮಬಲ ಸಾಧಿಸಲು ನೆರವಾದರು. ನಾಲ್ಕನೇ ಕ್ವಾರ್ಟರ್ನಲ್ಲಿ ಒಟ್ಟು 5 ಗೋಲುಗಳು ದಾಖಲಾಗಿದ್ದು, ಇದರಲ್ಲಿ ಮೂರು ಗೋಲುಗಳನ್ನು ಭಾರತದ ಆಟಗಾರರು ದಾಖಲಿಸಿದ್ದಾರೆ.
ಭಾರತದ ಸೆಮಿ ಫೈನಲ್ ಹಾದಿ ಸುಲಭವಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 2-2 ರಿಂದ ಡ್ರಾ ಸಾಧಿಸಿದ್ದ ಭಾರತ ವೇಲ್ಸ್ ವಿರುದ್ಧ ಪಂದ್ಯವನ್ನು 4-3 ಅಂತರದಿಂದ ಜಯ ಸಾಧಿಸಿತ್ತು. ಏಷ್ಯಾದ ಎದುರಾಳಿ ಮಲೇಷ್ಯಾವನ್ನು 2-1 ಅಂತರದಿಂದ ಮಣಿಸಿದ ಭಾರತ ಸೆಮಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ಹರ್ಮನ್ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದ್ದರು.