ಶೀಘ್ರವೇ ನೂತನ ಕೋಚ್ ಆಯ್ಕೆ: ಕ್ರಿಕೆಟ್ ಆಸ್ಟ್ರೇಲಿಯ
ಸಿಡ್ನಿ, ಎ.20: ಮುಂದಿನ ಕೆಲವೇ ವಾರದಲ್ಲಿ ಡರೆನ್ ಲೆಹ್ಮನ್ರಿಂದ ತೆರವಾದ ಮುಖ್ಯ ಕೋಚ್ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯ ಶುಕ್ರವಾರ ತಿಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯ ಮಂಡಳಿಯು ಸಭೆ ನಡೆಸಿ ನೂತನ ಕೋಚ್, ನಾಯಕ ಹಾಗೂ ಉಪ ನಾಯಕನ ಆಯ್ಕೆ ಬಗ್ಗೆ ಚರ್ಚಿಸಲಿದೆ. ಜೂನ್ ಆರಂಭದಲ್ಲಿ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳುವ ಮೊದಲೇ ಏಕದಿನ ತಂಡವನ್ನು ಪ್ರಕಟಿಸಲಾಗುತ್ತದೆ.
‘‘ತಂಡದ ಮುಖ್ಯ ಕೋಚ್, ಏಕದಿನ ತಂಡದ ನಾಯಕ ಹಾಗೂ ಉಪ ನಾಯಕನ ಹುದ್ದೆಗೆ ಅಭ್ಯರ್ಥಿಗಳನ್ನು ಶಿಫಾರಸು ಮಾಡುವಂತೆ ಆಡಳಿತ ಮಂಡಳಿಗೆ ಬೋರ್ಡ್ ತಿಳಿಸಿದೆ. ಕ್ರಿಕೆಟ್ ಮಂಡಳಿಯು ಮುಂದಿನ ವಾರ ಮ್ಯಾನೇಜ್ಮೆಂಟ್ನಿಂದ ಶಿಫಾರಸುಗಳನ್ನು ಸ್ವೀಕರಿಸಲಿದೆ. ಆಯ್ಕೆ ಅಂತಿಮವಾದ ಬಳಿಕ ಹೆಸರನ್ನು ಘೋಷಿಸಲಾಗುತ್ತದೆ’’ ಎಂದು ಮಂಡಳಿ ಅಧ್ಯಕ್ಷ ಡೇವಿಡ್ ಪೀವೆರ್ ಹೇಳಿದ್ದಾರೆ.
ವಿಕೆಟ್ಕೀಪರ್ ಟಿಮ್ ಪೈನ್ ಟೆಸ್ಟ್ ನಾಯಕನಾಗಿ ಮುಂದುವರೆಯಲಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿ ಹಾಗೂ ಟ್ವೆಂಟಿ-20ಯಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟತೆಯಿಲ್ಲ.
ಲೆಹ್ಮನ್ರಿಂದ ತೆರವಾದ ಸ್ಥಾನಕ್ಕೆ ಮಾಜಿ ಟೆಸ್ಟ್ ಆಟಗಾರರಾದ ಜಸ್ಟಿನ್ ಲ್ಯಾಂಗರ್, ಜೇಸನ್ ಗಿಲೆಸ್ಪಿ ಹಾಗೂ ರಿಕಿ ಪಾಂಟಿಂಗ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.