ಪಾಕ್ ವಿರುದ್ಧ ಟೆಸ್ಟ್: ಬಟ್ಲರ್ಗೆ ಬುಲಾವ್
ಲಂಡನ್, ಮೇ 15: ಇಂಗ್ಲೆಂಡ್ ತಂಡ ಲಾರ್ಡ್ಸ್ನಲ್ಲಿ ಮೇ 24 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ 12 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದು ಬ್ಯಾಟ್ಸ್ ಮನ್ ಜೋಸ್ ಬಟ್ಲರ್ಗೆ ಬುಲಾವ್ ನೀಡಿದೆ. ಇಂಗ್ಲೆಂಡ್ನ ಓರ್ವ ಪ್ರತಿಭಾವಂತ ಬ್ಯಾಟ್ಸ್ ಮನ್ ಬಟ್ಲರ್ ಟೆಸ್ಟ್ ಕ್ರಿಕೆಟ್ನಲ್ಲಿ 18 ಪಂದ್ಯಗಳನ್ನು ಆಡಿದ್ದಾರೆ. 2016ರ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ಭಾರತ ವಿರುದ್ಧ ಕೊನೆಯ ಬಾರಿ ಪಂದ್ಯವನ್ನು ಆಡಿದ್ದರು.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಆಗಿ ಮಿಂಚಿರುವ ಬಟ್ಲರ್ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಓರ್ವ ದಾಂಡಿಗನಾಗಿ ಆಯ್ಕೆಯಾಗಿದ್ದಾರೆ.
ಬಟ್ಲರ್ರಿಂದ ತೆರವಾದ ಟೆಸ್ಟ್ ಕೀಪರ್ ಸ್ಥಾನವನ್ನು ಭರ್ತಿ ಮಾಡಿರುವ ಜಾನಿ ಬೈರ್ಸ್ಟೋವ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಟ್ಲರ್ ಪ್ರಸ್ತುತ ಟ್ವೆಂಟಿ-20 ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ 95, 94 ಹಾಗೂ 81 ರನ್ ಗಳಿಸಿದ್ದಾರೆ.