ಫಿಫಾ: ಸ್ವೀಡನ್ ವಿರುದ್ಧ ಜರ್ಮನಿಗೆ ನಾಟಕೀಯ ಗೆಲುವು
ಸೋಚಿ, ಜೂ. 24: ಆಟ ಮುಕ್ತಾಯದ ಕ್ಷಣದಲ್ಲಿ ಟೋನಿ ಕ್ರೋಸ್ ಹೊಡೆದ ನಾಟಕೀಯ ಗೋಲಿನಿಂದ ಸ್ವೀಡನ್ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಜರ್ಮನಿ, ಫಿಫಾ ವಿಶ್ವಕಪ್ನ 16ರ ಘಟ್ಟಕ್ಕೆ ಮುನ್ನಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಅದ್ಭುತ ಹೊಡೆತ ಮೂಲಕ ಪರೋಕ್ಷ ಫ್ರೀ ಕಿಕ್ ಅನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಮೂರು ಅಂಕ ಬಾಚುವಲ್ಲಿ ನೆರವಾದರು. ಇದರೊಂದಿಗೆ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ತಂಡ ಎಫ್ ಗುಂಪಿನ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಆರು ಅಂಕಗಳೊಂದಿಗೆ ಮೆಕ್ಸಿಕೊ ಈಗಾಗಲೇ ಪ್ರಿಕ್ವಾರ್ಟರ್ ಹಂತಕ್ಕೆ ಮುನ್ನಡೆದಿದ್ದು, ತಲಾ ಮೂರು ಅಂಕಗಳನ್ನು ಹೊಂದಿರುವ ಸ್ವೀಡನ್ ಹಾಗೂ ಜರ್ಮನಿಯ ಪೈಕಿ ಒಂದು ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿದೆ.
ಟೋನಿ ಕ್ರೋಸ್ ಅವರನ್ನು ವಂಚಿಸಿ ಮಿಡ್ಫೀಲ್ಡ್ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಒಲೊ ಟೊಯಿವೊನೆನ್ ಗೋಲು ಗಳಿಸಿ 32ನೇ ನಿಮಿಷದಲ್ಲೆ ಸ್ವೀಡನ್ಗೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ 48ನೇ ನಿಮಿಷದಲ್ಲಿ ಮಾರ್ಕೊ ರೂಸ್ ಜರ್ಮನಿ ಪರ ಗೋಲು ಬಾರಿಸಿ ಸಮಬಲ ಸ್ಥಾಪಿಸಲು ನೆರವಾದರು. 82ನೇ ನಿಮಿಷದಲ್ಲಿ ಜೆರೋಮ್ ಬೊಟೆಂಗ್ ಹೊರಬಿದ್ದರೂ, ಆತ್ಮವಿಶ್ವಾಸದಿಂದ ಆಟ ಮುಂದುವರಿಸಿ, ಕೊನೆಕ್ಷಣದಲ್ಲಿ ಕ್ರೋಸ್ ಅವಿಸ್ಮರಣೀಯ ಗೆಲುವು ಕಸಿದುಕೊಂಡರು.
ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸ್ವೀಡನ್, ಮಧ್ಯಂತರದ ವೇಳೆಗೆ 2-0 ಮುನ್ನಡೆ ಗಳಿಸುವ ಅವಕಾಶವನ್ನು ಜರ್ಮನಿಯ ಗೋಲ್ಕೀಪರ್ ಮ್ಯಾನ್ಯುಯೆಲ್ ನೆನೂರ್ ವಿಫಲಗೊಳಿಸಿದರು. ಸೆಬಾಸ್ಟಿಯನ್ ಲಾರ್ಸನ್ ಅವರ ಫ್ರೀ ಕಿಕ್ ಅನ್ನು ಅದ್ಭುತವಾಗಿ ತಡೆದದ್ದು ಕೂಡಾ ಪಂದ್ಯದ ನಿರ್ಣಾಯಕ ನಡೆಯಾಯಿತು.