ಭಾರತಕ್ಕೆ ಜಪಾನ್ ವಿರುದ್ಧ 9-0 ಜಯ
ಏಶ್ಯನ್ ಚಾಂಪಿಯನ್ಸ್ ಟ್ರೋಫಿ
ಮಸ್ಕತ್, ಅ.22: ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್ನ ಲ್ಲಿ ರವಿವಾರ ಏಶ್ಯನ್ ಚಾಂಪಿಯನ್ ಜಪಾನ್ ವಿರುದ್ಧ ಭಾರತ ತಂಡ 9-0 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.
ಶುಕ್ರವಾರ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಭಾರತ ತಂಡ ಜಪಾನ್ ವಿರುದ್ಧ ಪಂದ್ಯದ ನಾಲ್ಕನೇ ನಿಮಿಷದಲ್ಲಿ ಗೋಲು ಜಮೆ ಮಾಡುವ ಮೂಲಕ ಉತ್ತಮ ಆರಂಭ ಪಡೆದಿತ್ತು. ಭಾರತದ ಮನ್ದೀಪ್ ಸಿಂಗ್(4ನೇ ನಿಮಿಷ, 49ನೇ ನಿ., 57ನೇ ನಿ.) ಹ್ಯಾಟ್ರಿಕ್ ಗೋಲು, ಹರ್ಮನ್ ಪ್ರೀತ್ ಸಿಂಗ್(17ನೇ ನಿ, 21ನೇ ನಿ.) ಎರಡು ಗೋಲುಗಳನ್ನು ದಾಖಲಿಸಿದರು.
ಗುರ್ಜಂತ್ ಸಿಂಗ್(8ನೇ ನಿ.) ,ಆಕಾಶ್ ದೀಪ್ (36ನೇ ನಿ.), ಸುಮಿತ್ (42ನೇ ನಿ.) ಮತ್ತು ಲಲಿತ್ ಉಪಾಧ್ಯಾಯ ( 45ನೇ ನಿ.)ತಲಾ ಒಂದು ಗೋಲು ಜಮೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಕಾಶ್ದೀಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಂಡೋನೇಶ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಏಶ್ಯನ್ ಗೇಮ್ಸ್ನ ಗ್ರೂಪ್ ಹಂತದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 8-0 ಜಯ ಗಳಿಸಿತ್ತು. ಫೈನಲ್ನಲ್ಲಿ ಜಪಾನ್ ಜಯ ಗಳಿಸಿ ಚಿನ್ನ ಬಾಚಿಕೊಂಡಿತ್ತು. ಆದರೆ ಭಾರತ ಕಂಚು ಪಡೆದಿತ್ತು.
ಭಾರತ ಮೊದಲಾರ್ಧದ ಹೊತ್ತಿಗೆ 4-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದ ಮೊದಲ 15 ನಿಮಿಷಗಳಲ್ಲಿ ಮತ್ತೆ 3 ಗೋಲುಗಳನ್ನು ಜಮೆ ಮಾಡಿತು. ಕೊನೆಯ 15 ನಿಮಿಷಗಳಲ್ಲಿ 2 ಗೋಲುಗಳನ್ನು ಜಮೆ ಮಾಡಿದ ಭಾರತ ಭರ್ಜರಿ ಗೆಲುವು ದಾಖಲಿಸಿತು.