ಸಲಾಹ್ ವರ್ಷದ ಆಫ್ರಿಕನ್ ಫುಟ್ಬಾಲಿಗ ಸತತ ಎರಡನೇ ಬಾರಿ ಗೌರವ
ಲಂಡನ್, ಡಿ.15: ಲಿವರ್ಪೂಲ್ ಕ್ಲಬ್ ಹಾಗೂ ಈಜಿಪ್ಟ್ ತಂಡದ ಖ್ಯಾತ ಫುಟ್ಬಾಲ್ ಆಟಗಾರ ಮುಹಮ್ಮದ್ ಸಲಾಹ್ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಬಿಬಿಸಿ ‘ವರ್ಷದ ಆಫ್ರಿಕನ್ ಫುಟ್ಬಾಲ್ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018ನೇ ಸಾಲಿನ ಪ್ರಶಸ್ತಿ ಅವರಿಗೆ ಸಂದಿದೆ.
26 ವರ್ಷ ಪ್ರಾಯದ ಸಲಾಹ್, ಪ್ರಶಸ್ತಿ ರೇಸ್ನಲ್ಲಿ ಮೆಧಿ ಬೆನಾಟಿಯ, ಕಾಲಿಡೊ ಕೌಲಿಬ್ಯಾಲಿ, ಸದಿಯೊ ಮೇನ್ ಹಾಗೂ ಥಾಮಸ್ ಪಾರ್ಟೆ ಅವರನ್ನು ಸೋಲಿಸಿದ್ದಾರೆ. ಸದ್ಯ ಜಾಯ್-ಜಾಯ್ ಒಕೋಚಾ ಬಳಿಕ ಈ ಪ್ರಶಸ್ತಿಯನ್ನು ಸತತ 2ನೇ ಬಾರಿ ಗೆದ್ದ ಆಟಗಾರನಾಗಿ ಸಲಾಹ್ ದಾಖಲೆ ಬರೆದಿದ್ದಾರೆ. ಕಳೆದ ಋತುವಿನಲ್ಲಿ ಲಿವರ್ಪೂಲ್ ಪರ 52 ಪಂದ್ಯಗಳಿಂದ ಸಲಾಹ್ 44 ಗೋಲುಗಳನ್ನು ಬಾರಿಸಿದ್ದರು. ರೋಮಾ ಕ್ಲಬ್ ತಂಡದಿಂದ ಲಿವರ್ಪೂಲ್ಗೆ ಸೇರ್ಪಡೆಯಾದ ನಂತರ ಅವರಿಂದ ಈ ಪ್ರದರ್ಶನ ಹೊರಹೊಮ್ಮಿತ್ತು. ಈ ವೇಳೆ ಲಿವರ್ಪೂಲ್ ಚಾಂಪಿಯನ್ಸ್ ಲೀಗ್ನ ಫೈನಲ್ ತಲುಪಿತ್ತು.
Next Story