ಬಾರ್ಸಿಲೋನ ಜಯಭೇರಿ
ಕುಟಿನೊ ಅವಳಿ ಗೋಲು
ಬಾರ್ಸಿಲೋನ(ಸ್ಪೇನ್), ಜ.31: ಫಿಲಿಪ್ಪೆ ಕುಟಿನೊ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಬಾರ್ಸಿಲೋನ ಫುಟ್ಬಾಲ್ ತಂಡ ಸೆವಿಲ್ಲಾ ತಂಡವನ್ನು ಬುಧವಾರ 6-1 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಕೊಪಾ ಡೆಲ್ ರೆ ಸಮಿಫೈನಲ್ಸ್ನಲ್ಲಿ 6-3ರ ಸರಾಸರಿಯನ್ನು ಸಾಧಿಸಿದೆ.
ಕಳೆದ ವಾರ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಬಾರ್ಸಿಲೋನ ತಂಡ ಸೆವಿಲ್ಲಾ ತಂಡಕ್ಕೆ 0-2ರಿಂದ ಮಣಿದಿತ್ತು. ಪಂದ್ಯದ 13ನೇ ನಿಮಿಷದಲ್ಲಿ ಎದುರಾಳಿ ತಂಡದ ಕ್ವಿನ್ಸಿ ಪ್ರೊಮೊಸ್ ಮಾಡಿದ ತಪ್ಪಿನಿಂದಾಗಿ ಸಿಕ್ಕಿದ ಪೆನಾಲ್ಟಿಯಲ್ಲಿ ಕುಟಿನೊ ಗೋಲಿನ ಖಾತೆ ತೆರೆದರು.
ಮೆಸ್ಸಿ ನೀಡಿದ ಪಾಸ್ನ್ನು ಸೂಕ್ತವಾಗಿ ಬಳಸಿದ ಬ್ರೆಝಿಲಿಯನ್ ಆಟಗಾರ ಕುಟಿನೊ ಗೋಲಿನ ಬರವನ್ನು ನೀಗಿಸಿಕೊಂಡರು. ಆ ಬಳಿಕ ರ್ಯಾಕಿಟಿಕ್ (31ನೇ ನಿಮಿಷ), ಫಿಲಿಪ್ಪೆ ಕುಟಿನೊ(53ನೇ ನಿಮಿಷ), ಸರ್ಜಿ ರಾಬರ್ಟೊ (53ನೇ ನಿಮಿಷ), ಲೂಯಿಸ್ ಸ್ವಾರೆಝ್ (89ನೇ ನಿಮಿಷ) ಹಾಗೂ ಲಿಯೊನೆಲ್ ಮೆಸ್ಸಿ(90 ಪ್ಲಸ್ 2 ನಿಮಿಷ) ಬಾರ್ಸಿಲೋನ ಪರ ಗೋಲು ಮಳೆ ಸುರಿಸಿದರು. ಸೆವಿಲ್ಲಾ ಪರ ಗುಲೆರ್ಮ್ ಅರಾನಾ (67ನೇ ನಿಮಿಷ) ಏಕೈಕ ಗೋಲು ಗಳಿಸಿದರು.