ರಾಜಸ್ಥಾನ ರಾಯಲ್ಸ್ಗೆ ಗುಲಾಬಿ ಸಮವಸ್ತ್ರ
ಹೊಸದಿಲ್ಲಿ,ಫೆ.10: ಐಪಿಎಲ್ ಪಂದ್ಯಾವಳಿಯ 12ನೇ ಆವೃತ್ತಿಯಲ್ಲಿ ಗುಲಾಬಿ ಬಣ್ಣದ ಸಮವಸ್ತ್ರ ಧರಿಸುವುದಾಗಿ ಮಾಜಿ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ತಿಳಿಸಿದೆ. ಸಮವಸ್ತ್ರವಲ್ಲದೆ ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿ ಕೂಡಾ ಬದಲಾಗಿದ್ದು ಮಾಜಿ ನಾಯಕ ಶೇನ್ ವಾರ್ನ್ ಅವರನ್ನು ನೂತನ ರಾಯಭಾರಿಯಾಗಿ ನೇಮಿಸಲಾಗಿದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ ವರ್ಷ ಐಪಿಎಲ್ನ ಒಂದು ಪಂದ್ಯದಲ್ಲಿ ಗುಲಾಬಿ ಬಣ್ಣದ ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ತಂಡದ ಅಭಿಮಾನಿಗಳಿಂದ ವ್ಯಕ್ತವಾದ ಮೆಚ್ಚುಗೆಯ ಹಿನ್ನೆಲೆಯಲ್ಲಿ ತಂಡದ ಸಮವಸ್ತ್ರವನ್ನು ಗುಲಾಬಿ ಬಣ್ಣಕ್ಕೆ ಬದಲಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಂಡ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ತಿಳಿಸಿದೆ. ಜೈಪುರವನ್ನು ‘ಪಿಂಕ್ ಸಿಟಿ’ ಎಂದು ಕರೆದರೆ ಜೋಧ್ಪುರ ಗುಲಾಬಿ ಹರಳಿಗೆ ಪ್ರಸಿದ್ಧವಾಗಿದೆ ಮತ್ತು ಉದಯ್ಪುರ ಗುಲಾಬಿ ಶಿಲೆಯನ್ನು ಉತ್ಪಾದಿಸುತ್ತದೆ. ಹಾಗಾಗಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುಲಾಬಿ ಬಣ್ಣ ಹೆಚ್ಚು ಸೂಕ್ತವೆನಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.