ಹರಾಜು ಗುಂಪಿಗೆ ಅರ್ಜುನ್ ತೆಂಡುಲ್ಕರ್ ಪ್ರವೇಶ
ಮುಂಬೈ ಲೀಗ್ ಕ್ರಿಕೆಟ್
ಮುಂಬೈ, ಮಾ.16: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಟಿ20 ಲೀಗ್ನ ಹರಾಜು ಗುಂಪಿಗೆ ಹೆಸರು ನೀಡುವ ಮೂಲಕ ಕಿರಿಯರ ಕ್ರಿಕೆಟ್ ವಿಭಾಗದಿಂದ ಹಿರಿಯರ ವಿಭಾಗಕ್ಕೆ ಜಿಗಿಯಲು ಸಕಲ ರೀತಿಯಲ್ಲಿ ಸನ್ನದ್ಧರಾಗಿದ್ದಾರೆ.
ಎಡಗೈ ಮಧ್ಯಮವೇಗಿ ಆಗಿರುವ ಜೂನಿಯರ್ ತೆಂಡುಲ್ಕರ್ ಕಳೆದ ವರ್ಷ ಶ್ರೀಲಂಕಾ ವಿರುದ್ಧ ನಡೆದ ಅಂಡರ್-19 ಟೆಸ್ಟ್ ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ವೇಳೆ ಅವರು ಮೂರು ವಿಕೆಟ್ ಕಿತ್ತಿದ್ದರು.
ಅರ್ಜುನ್ ಹೆಸರು ಮಹಾನ್ ವ್ಯಕ್ತಿಯೊಂದಿಗೆ (ಸಚಿನ್ ತೆಂಡುಲ್ಕರ್) ಸಂಬಂಧ ಹೊಂದಿರುವುದರಿಂದ ಫ್ರಾಂಚೈಸಿಗಳು ಅವರನ್ನು ಕೊಂಡುಕೊಳ್ಳಲು ಹೆಚ್ಚಿನ ನಿಗಾ ವಹಿಸಲಿವೆ. ಅಲ್ಲದೆ ಹರಾಜಿನಲ್ಲಿ ಅರ್ಜುನ್ ಪಾಲ್ಗೊಳ್ಳುತ್ತಿರುವುದು ಅಭಿಮಾನಿಗಳಿಗೆ ಆಸಕ್ತಿಯ ಸಂಗತಿಯಾಗಿದೆ.
19 ವರ್ಷ ವಯಸ್ಸಿನ ಅರ್ಜುನ್ ಇತ್ತೀಚೆಗೆ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಆಡಿದ್ದರು. ಇದರ ಜೊತೆಗೆ ಮುಂಬೈ ಅಂಡರ್-23 ತಂಡದಲ್ಲಿಯೂ ಆಡಿದ್ದಾರೆ.
Next Story