ಟ್ರೋಫಿ ಇಲ್ಲ, ವಿಷಾದವೂ ಇಲ್ಲ: ರೋಜರ್ ಫೆಡರರ್
ಮಿಯಾಮಿ ಓಪನ್ಗೆ ಸಜ್ಜಾದ ಸ್ವಿಸ್ ದಂತಕತೆ
ಇಂಡಿಯನ್ ವೆಲ್ಸ್, ಮಾ.19: ಸ್ವಿಟ್ಝರ್ಲೆಂಡ್ನ ತಾರಾ ಆಟಗಾರ ರೋಜರ್ ಫೆಡರರ್ ಸತತ ಎರಡನೇ ವರ್ಷ ಇಂಡಿಯನ್ ವೆಲ್ಸ್ನಲ್ಲಿ ಟ್ರೋಫಿಯಿಲ್ಲದೆ ಬರಿಗೈಯಲ್ಲಿ ಮರಳಿದ್ದು ಮಿಯಾಮಿ ಓಪನ್ಗೆ ತೆರಳಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಲಿದ್ದಾರೆ.
‘‘ಇಂಡಿಯನ್ ವೆಲ್ಸ್ನಲ್ಲಿ ಟ್ರೋಫಿ ಗೆಲ್ಲದಿರುವುದು ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ದುಃಖ ಮತ್ತು ಹತಾಶೆಯ ಸಂಗತಿ’’ ಎಂದು ರವಿವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೊಮಿನಿಕ್ ಥೀಮ್ಗೆ 6-3, 3-6, 5-7 ಸೆಟ್ಗಳಿಂದ ಸೋತ ಬಳಿಕ ಫೆಡರರ್ ನುಡಿದರು.
ವಿಶೇಷವಾಗಿ ತಮ್ಮ 37ನೇ ವಯಸ್ಸಿನಲ್ಲಿಯೂ ಫಿಟ್ ಆಗಿರುವ 20 ಗ್ರಾನ್ಸ್ಲಾಮ್ ಪ್ರಶಸ್ತಿ ವಿಜೇತ, ಕಳೆದ ತಿಂಗಳು ದುಬೈನಲ್ಲಿ ವೃತ್ತಿಜೀವನದ 100ನೇ ಪ್ರಶಸ್ತಿ ಗೆದ್ದ ಫೆಡರರ್ ಸೋಲನ್ನು ಮರೆತು ಮುನ್ನುಗ್ಗುವಷ್ಟು ಸಮರ್ಥರಾಗಿದ್ದಾರೆ.
‘‘ಇದು ನಾಟಕೀಯವೇನೂ ಅಲ್ಲ. ಥೀಮ್ ನನಗಿಂತ ಸ್ವಲ್ಪ ಉತ್ತಮ ಆಟಗಾರ’’ ಎಂದು ಸೋಲಿನ ಕುರಿತು ಫೆಡರರ್ ಪ್ರತಿಕ್ರಿಯಿಸುತ್ತಾರೆ. ‘‘ನಾನು ಈಗ ಮಿಯಾಮಿಗೆ ತೆರಳುತ್ತಿದ್ದು ದೇಹ ಸದೃಢವಾಗಿದೆ. ಅದು ಯಾವಾಗಲೂ ನನ್ನನ್ನು ಉತ್ಸಾಹಿತನನ್ನಾಗಿ ಮಾಡುತ್ತದೆ ’’ ಎಂದು ಅವರು ಹೇಳುತ್ತಾರೆ.
ಸ್ವಿಸ್ ದಂತಕತೆ ಮಿಯಾಮಿಯಲ್ಲಿ ಮೂರು ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಆದರೆ ಕಳೆದ ವರ್ಷ ಮಿಯಾಮಿಯಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಹಾಗೂ ಇಂಡಿಯನ್ ವೆಲ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೋಲು ಕಂಡಿದ್ದರು.