ಇಂಡೋನೇಶ್ಯ ವಿರುದ್ಧ ಭಾರತದ ವನಿತೆಯರಿಗೆ ಜಯ
ಒಲಿಂಪಿಕ್ಸ್ ಅರ್ಹತಾ 2ನೇ ಸುತ್ತು
ಡ್ಯಾಂಗ್ಮೆ ಗ್ರೇಸ್ ಅವಳಿ ಗೋಲು
ಮಂಡಲಾಯ್(ಮಯನ್ಮಾರ್), ಎ.3: ಇಂಡೋನೇಶ್ಯ ತಂಡದ ವಿರುದ್ಧ ಬುಧವಾರ ನಡೆದ ಒಲಿಂಪಿಕ್ಸ್ ಅರ್ಹತಾ 2ನೇ ಸುತ್ತಿನ ಆರಂಭಿಕ ಪಂದ್ಯದಲ್ಲಿ ಭಾರತದ ಮಹಿಳಾ ಫುಟ್ಬಾಲ್ ತಂಡ 2-0 ಗೋಲುಗಳ ಅಂತರದಿಂದ ಗೆಲ್ಲುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಗಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಭಾರತದ ಪರ ಡ್ಯಾಂಗ್ಮೆ ಗ್ರೇಸ್ (27 ಹಾಗೂ 67ನೇ ನಿಮಿಷ) ಎರಡೂ ಗೋಲುಗಳ ಕಾಣಿಕೆ ನೀಡಿ ಗೆಲುವಿನ ದಾರಿ ಸುಗಮವಾಗಿಸಿದರು.
ಮಾಯ್ಮೋಲ್ ರಾಕಿ ತರಬೇತಿಯಲ್ಲಿ ಪಳಗುತ್ತಿರುವ ಭಾರತ ತಂಡ ಪಂದ್ಯದಲ್ಲಿ ಅವಕಾಶ ಸೃಷ್ಟಿ ಹಾಗೂ ಆಕ್ರಮಣಕಾರಿ ಆಟದಲ್ಲಿ ಮಿಂಚಿತು.
‘‘ಅರ್ಹತಾ ಅಭಿಯಾನವನ್ನು ಗೆಲುವಿನ ಮೂಲಕ ಆರಂಭಿಸಲು ನಾವು ಚಿಂತನೆ ನಡೆಸಿದ್ದೆವು. ಅದೇ ರೀತಿ ಆಗಿದೆ. ಇಂಡೋನೇಶ್ಯ ತಾನು ಕಠಿಣ ಎದುರಾಳಿ ಎಂದು ಸಾಬೀತು ಮಾಡಿತು.ಆದರೆ ನಾವು ಮೂರು ಅಂಕ ಗಳಿಸುವ ದಾರಿಯನ್ನು ಕಂಡುಕೊಂಡೆವು. ಗೆಲುವಿನ ವೇಗವನ್ನು ಮುಂದುವರಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಹಾಗೆ ಮಾಡಲು ನಮಗೆ ಸಾಧ್ಯವಿದೆ. ಒಂದು ಸಮಯದಲ್ಲಿ ಒಂದೇ ಪಂದ್ಯವನ್ನು ನಾವು ಆಡುತ್ತೇವೆ. ಆದರೆ ಮುಂದಿನ ಎದುರಾಳಿಯ ಬಗ್ಗೆ ನಾವು ಗಮನಹರಿಸುತ್ತಿರಬೇಕು ’’ ಎಂದು ಮಹಿಳಾ ತಂಡದ ಕೋಚ್ ಮಾಯ್ಮೋಲ್ ರಾಕಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.
ಈ ವರ್ಷದ ಸ್ಯಾಫ್ ಟ್ರೋಫಿಯನ್ನು ಗೆಲ್ಲುವ ಮೂಲಕ 5ನೇ ಬಾರಿ ಟ್ರೋಫಿ ಗೆದ್ದ ಉತ್ಸಾಹದಲ್ಲಿರುವ ಭಾರತ ಗೆಲುವಿನ ವೇಗವನ್ನು ಕಾಪಾಡಿಕೊಂಡು, ಇಂಡೋನೇಶ್ಯ ತಂಡದ ಮೇಲೆ ಮೊದಲ ನಿಮಿಷದಿಂದಲೇ ಒತ್ತಡ ಹೇರಲು ಆರಂಭಿಸಿತು. 27ನೇ ನಿಮಿಷದಲ್ಲಿ ಗ್ರೇಸ್ ಗೋಲು ಪೆಟ್ಟಿಗೆಯ ಹತ್ತಿರದಿಂದ ಬಾರಿಸಿದ ಚೆಂಡು ಮೊದಲ ಗೋಲಿನ ರೂಪದಲ್ಲಿ ಭಾರತಕ್ಕೆ ದೊರೆಯಿತು. ಆ ಬಳಿಕ ಇಂಡೋನೇಶ್ಯ ಪ್ರತಿದಾಳಿಯನ್ನು ತಡೆಯುವಲ್ಲಿ ಭಾರತದ ಗೋಲ್ಕೀಪರ್ ಲಿಂತೊಯಿಂಗಾಮಿ ದೇವಿ ಭಾರೀ ಮುತುವರ್ಜಿ ವಹಿಸಿದರು. 67ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಗೋಲು ಗ್ರೇಸ್ ಮೂಲಕವೇ ಬಂದಿತು.