ಸೌರವ್, ಜೋಶ್ನಾಗೆ ಗಾಯಗೊಂಡ ಆಟಗಾರ ಕೋಚ್!
ಹೊಸದಿಲ್ಲಿ, ಮೇ 6: ಭಾರತದ ಸ್ಕ್ವಾಷ್ ತಂಡ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಮುಖ್ಯ ಕೋಚ್ ಇಲ್ಲದೇ ಟೂರ್ನಿಗಳಲ್ಲಿ ಭಾಗವಹಿಸುತ್ತಿದೆ. ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿರುವ ಭಾರತದ ಸ್ಕ್ವಾಷ್ ಸ್ಟಾರ್ಗಳಾದ ಸೌರವ್ ಘೋಷಾಲ್ ಹಾಗೂ ಜೋಶ್ನಾ ಚಿನ್ನಪ್ಪ ಗಾಯಗೊಂಡಿದ್ದ ಸಹ ಆಟಗಾರ, ಹಂಗಾಮಿ ಕೋಚ್ ಹರಿಂದರ್ಪಾಲ್ ಸಿಂಗ್ ಸಂಧುರಿಂದ ಸಲಹೆ ಪಡೆದು ಪ್ರಶಸ್ತಿ ಜಯಿಸಿದ್ದಾರೆ. ಸಂಧು ಸಕ್ರಿಯ ಸ್ಕ್ವಾಷ್ ಆಟಗಾರನಾಗಿದ್ದು ಘೋಷಾಲ್ರ ಉತ್ತಮ ಸ್ನೇಹಿತ. 10ನೇ ರ್ಯಾಂಕಿನ ಘೋಷಾಲ್ ಹಾಲಿ ಏಶ್ಯನ್ ಚಾಂಪಿಯನ್ ಲಿಯೊ ಔರನ್ನು ನೇರ ಗೇಮ್ಗಳಿಂದ ಮಣಿಸಿ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿದ ಭಾರತ ಮೊದಲ ಆಟಗಾರ ಎನಿಸಿಕೊಂಡಾಗ ಸಂಧು ಅಂಗಣದ ಹೊರಗೆ ಕುಳಿತ್ತಿದ್ದರು. ಆದರೆ, ಈ ಬಾರಿ ಸಂಧು ಕೇವಲ ಸಹ ಆಟಗಾರನಾಗಿ ಕುಳಿತಿರಲಿಲ್ಲ. ಓರ್ವ ಅಧಿಕೃತ ಕೋಚ್ ಆಗಿ ತಂಡದೊಂದಿಗೆ ಕೌಲಾಲಂಪುರಕ್ಕೆ ತೆರಳಿದ್ದರು.
ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸಂಧು ಹಂಗಾಮಿ ಕೋಚ್ ಆಗಿಯೂ ಉತ್ತಮ ನಿರ್ವಹಣೆ ತೋರಿದ್ದಾರೆ. ರಾಷ್ಟ್ರೀಯ ಕೋಚ್ ಸೈರಸ್ ಪೂಂಚಾ ವರ್ಷದ ಅತ್ಯಂತ ಪ್ರಮುಖ ಟೂರ್ನಿಯಲ್ಲಿ ಒಂದಾಗಿರುವ ಏಶ್ಯನ್ ಚಾಂಪಿಯನ್ಶಿಪ್ಗೆ ತಂಡದೊಂದಿಗೆ ತೆರಳಿರಲಿಲ್ಲ.
ಇಂತಹ ಪರಿಸ್ಥಿತಿ ಭಾರತದ ಸ್ಕ್ವಾಷ್ ತಂಡಕ್ಕೆ ಹೊಸತೇನಲ್ಲ. ಕಳೆದ ವರ್ಷ ನಡೆದ ಏಶ್ಯನ್ ಗೇಮ್ ್ಸನಲ್ಲೂ ಆಟಗಾರರು ಪರಸ್ಪರ ಸಲಹೆ ಪಡೆದುಕೊಂಡು ಆಡಿದ್ದರು. ಇದು ತಂಡದೊಂದಿಗೆ ತೆರಳಿದ್ದ ಸಹಾಯಕ ಸಿಬ್ಬಂದಿಗಳಾದ ಪೊಂಚಾ ಹಾಗೂ ಭುವನೇಶ್ವರಿ ಕುಮಾರಿಗೆ ಮುಜುಗರ ಉಂಟು ಮಾಡಿತ್ತು.
ಮಾ.2018ರಿಂದ ಭಾರತದ ಸ್ಕ್ವಾಷ್ ತಂಡದಲ್ಲಿ ವಿದೇಶಿ ಕೋಚ್ ಇಲ್ಲದಿದ್ದರೂ ಕೌಲಾಲಂಪುರಕ್ಕೆ ಪೂಂಚಾ ಏಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಭಾರತೀಯ ಸ್ಕ್ವಾಷ್ ಒಕ್ಕೂಟದ ಅಧ್ಯಕ್ಷ ದೇಬೇಂದ್ರನಾಥ್ ಸಾರಂಗಿ ಬಳಿ ಉತ್ತರವಿರಲಿಲ್ಲ.