ವಿಶ್ವಕಪ್ನಲ್ಲಿ ಸತತ 5ನೇ ಅರ್ಧಶತಕ ಸಿಡಿಸಿದ ಕೊಹ್ಲಿ
ಬರ್ಮಿಂಗ್ಹ್ಯಾಮ್, ಜೂ.30: ಭಾರತದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ 5ನೇ ಅರ್ಧಶತಕ ಸಿಡಿಸಿದ ವಿಶ್ವದ ಎರಡನೇ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. ಈ ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಳಿಸಿದರು.
ರನ್ ಯಂತ್ರ ಖ್ಯಾತಿಯ ಕೊಹ್ಲಿ ರವಿವಾರ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ವಿಶ್ವಕಪ್ನಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ದಾಂಡಿಗನಾಗಿದ್ದಾರೆ. 2015ರ ವಿಶ್ವಕಪ್ನಲ್ಲಿ ಅವರು ಸತತ 5 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದರು.
ಕೊಹ್ಲಿ ವಿಶ್ವಕಪ್ನಲ್ಲಿ ಸತತ 5 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಮೊದಲ ನಾಯಕನಾಗಿದ್ದಾರೆ. ದಕ್ಷಿಣ ಆಫ್ರಿಕದ ಗ್ರೇಮ್ ಸ್ಮಿತ್ ಹಾಗೂ ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ವಿಶ್ವಕಪ್ನಲ್ಲಿ ಸತತ 4 ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಕೊಹ್ಲಿ 59 ಎಸೆತಗಳಲ್ಲಿ 6 ಬೌಂಡರಿ ಬೆಂಬಲದಿಂದ ಏಕದಿನ ಕ್ರಿಕೆಟ್ನಲ್ಲಿ 54ನೇ ಅರ್ಧಶತಕ ದಾಖಲಿಸಿದರು. ಇಂಗ್ಲೆಂಡ್ ವಿರುದ್ಧ ಆಡಿದ ಕಳೆದ 5 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಅರ್ಧಶತಕ ಸಿಡಿಸಿದರು. ಕೊಹ್ಲಿ ಟೂರ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ 82 ರನ್ ಗಳಿಸಿದ್ದರು. ಪಾಕ್ ವಿರುದ್ಧ 77, ಬಾಂಗ್ಲಾದೇಶ ವಿರುದ್ಧ 67 ಹಾಗೂ ವೆಸ್ಟ್ಇಂಡೀಸ್ ವಿರುದ್ಧ 72 ರನ್ ಗಳಿಸಿದ್ದಾರೆ.
ಕೊಹ್ಲಿ ಇತ್ತೀಚೆಗೆ ವಿಂಡೀಸ್ ವಿರುದ್ಧ 72 ರನ್ ಗಳಿಸುವುದರೊಂದಿಗೆ ಅತ್ಯಂತ ವೇಗವಾಗಿ 20,000 ಅಂತರ್ರಾಷ್ಟ್ರೀಯ ರನ್ ಕಲೆ ಹಾಕಿದ್ದರು. ಈ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ಹೆಸರಲ್ಲಿ ದೀರ್ಘಕಾಲದಿಂದ ಇದ್ದ ದಾಖಲೆಯನ್ನು ಮುರಿದಿದ್ದರು.