ಫೈನಲ್ ಪಂದ್ಯದ ಟಿಕೆಟ್ಗಳನ್ನು ಮರುಮಾರಾಟ ಮಾಡಿ
ಭಾರತೀಯರಿಗೆ ನೀಶಾಮ್ ಮನವಿ
ಲಂಡನ್,ಜು.13: ಐಸಿಸಿ ವಿಶ್ವಕಪ್ ಕ್ರಿಕೆಟ್ನ ಅಂತಿಮ ಹಣಾಹಣಿಯನ್ನು ವೀಕ್ಷಿಸಲು ಈಗಾಗಲೇ ಟಿಕೆಟ್ ಖರೀದಿಸಿರುವ ಭಾರತೀಯ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವುದಿಲ್ಲವಾದಲ್ಲಿ ಅವರ ಟಿಕೆಟ್ಗಳನ್ನು ಮರುಮಾರಾಟ ಮಾಡುವಂತೆ ನ್ಯೂಝಿಲ್ಯಾಂಡ್ನ ಆಲ್ರೌಂಡ್ ಆಟಗಾರ ಜಿಮ್ಮಿ ನೀಶಾಮ್ ಮನವಿ ಮನವಿ ಮಾಡಿದ್ದಾರೆ. ಟೀಂ ಇಂಡಿಯಾ ಸದ್ಯ ನಡೆಯುತ್ತಿರುವ ವಿಶ್ವಕಪ್ನ ಫೈನಲ್ ಪ್ರವೇಶಿಸುತ್ತದೆ ಎಂಬ ಭರವಸೆ ಹೊಂದಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಅಂತಿಮ ಹಣಾಹಣಿಯ ಟಿಕೆಟ್ ಖರೀದಿಸಿದ್ದಾರೆ. ಆದರೆ ಟೀಮ್ ಇಂಡಿಯಾ ಈಗಾಗಲೇ ಸ್ಪರ್ಧೆಯಿಂದ ಹೊರಬಿದ್ದಿದ್ದು ನ್ಯೂಝಿಲ್ಯಾಂಡ್ ಮತ್ತು ಇಂಗ್ಲೆಂಡ್ ಮಧ್ಯೆ ನಿರ್ಣಾಯಕ ಪಂದ್ಯ ನಡೆಯಲಿದೆ. ಭಾರತೀಯ ಅಭಿಮಾನಿಗಳ ಮಧ್ಯೆ ಎರಡು ಆಯ್ಕೆಗಳಿವೆ. ಒಂದೋ ಅಂತಿಮ ಪಂದ್ಯವನ್ನು ವೀಕ್ಷಿಸಬಹುದು ಅಥವಾ ಟಿಕೆಟ್ಗಳನ್ನು ಮರುಮಾರಾಟ ಮಾಡಬಹುದು. ಹಾಗಾಗಿ ಟಿಕೆಟ್ ಮರುಮಾರಾಟ ಮಾಡಲು ಬಯಸುವವರು ಐಸಿಸಿಯ ಅಧಿಕೃತ ಜಾಲತಾಣದ ಮೂಲಕ ತಮ್ಮ ಟಿಕೆಟ್ಗಳನ್ನು ಮರುಮಾರಾಟ ಮಾಡಬಹುದು. ಇದರಿಂದ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು ಎನ್ನುವ ಆಸೆಯೂ ಇದೆ ಎಂದು ನನಗೆ ತಿಳಿದಿದೆ. ಆದರೆ ಕೇವಲ ಶ್ರೀಮಂತರಿಗಷ್ಟೇ ಅಲ್ಲದೆ, ಕ್ರಿಕೆಟ್ನ ನೈಜ ಅಭಿಮಾನಿಗಳಿಗೂ ಫೈನಲ್ ಪಂದ್ಯ ವೀಕ್ಷಿಸುವ ಅವಕಾಶ ಮಾಡಿಕೊಡಿ ಎಂದು ನೀಶಾಮ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟಿಕೆಟ್ ವಾಪಸಾತಿ ನೀತಿಯನ್ನು ರೂಪಿಸಿದ್ದು ಅಭಿಮಾನಿಗಳು ತಮ್ಮ ಟಿಕೆಟ್ ವಾಪಸ್ ನೀಡಿದರೆ ಸಂಪೂರ್ಣ ಟಿಕೆಟ್ ಮೊತ್ತವನ್ನು ಮರಳಿಸಲಾಗುತ್ತದೆ.