ಇಂದಿನಿಂದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ವಿಶ್ವ ಚಾಂಪಿಯನ್ ಸಿಂಧು
ಇಂಚಿಯಾನ್(ಕೊರಿಯ), ಸೆ.23: ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರ ಇಲ್ಲಿ ಆರಂಭವಾಗಲಿದ್ದು, ಚೀನಾ ಓಪನ್ನಲ್ಲಿ ಬೇಗನೆ ನಿರ್ಮಿಸಿದ್ದ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಸೋಲಿನ ಆಘಾತದಿಂದ ಬೇಗನೆ ಹೊರಬಂದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿ ಮಿಂಚಿದ್ದ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಕಳೆದ ವಾರ ನಡೆದ ಚೀನಾ ಓಪನ್ ಸೂಪರ್-1000 ಇವೆಂಟ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪೊರ್ನ್ಪಾವೀ ಚೊಚುವಾಂಗ್ ವಿರುದ್ಧ ಶರಣಾಗಿ ಟೂರ್ನಿಯಿಂದ ಬೇಗನೆ ನಿರ್ಗಮಿಸಿದ್ದರು.
2017ರಲ್ಲಿ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿದ್ದ 24ರ ಹರೆಯದ ಸಿಂಧು ಚೀನಾ ಓಪನ್ನಲ್ಲಿ ಬೇಗನೆ ನಿರ್ಗಮಿಸಲು ಕಾರಣವಾಗಿದ್ದ ಸಮಸ್ಯೆಯನ್ನು ನಿವಾರಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ. 400,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯತ್ತ ಹೆಚ್ಚು ಗಮನ ನೀಡಲು ಬಯಸಿದ್ದಾರೆ.
ಸಿಂಧು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆವೆನ್ ಝಾಂಗ್ರನ್ನು ಎದುರಿಸಲಿದ್ದಾರೆ.ಬಾಸೆಲ್ನಲ್ಲಿ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವ ಹಾದಿಯಲ್ಲಿ ಸಿಂಧು ಅವರು ಝಾಂಗ್ರನ್ನು ಸೋಲಿಸಿದ್ದರು. ಇದೀಗ ಚೀನಾ ಸಂಜಾತೆ ಶಟ್ಲರ್ನ್ನು ಮತ್ತೊಮ್ಮೆ ಸೋಲಿಸುವ ವಿಶ್ವಾಸದಲ್ಲಿದ್ದಾರೆ. ಝಾಂಗ್ ಕಳೆದ ವರ್ಷ ಇಂಡಿಯಾ ಓಪನ್ ಹಗೂ ಡೆನ್ಮಾರ್ಕ್ ಓಪನ್ನಲ್ಲಿ ಸಿಂಧುಗೆ ಸೋಲುಣಿಸಿದ್ದರು.
ಸಿಂಧು ಈ ಬಾರಿ ವಿಶ್ವ ಚಾಂಪಿಯನ್ಶಿಪ್ ಫೈನಲ್ಗೆ ತಲುಪಿದ್ದಲ್ಲದೆ ಇಂಡೋನೇಶ್ಯ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ತಲುಪಿದ್ದರು. ಆದರೆ, ಅವರಿಗೆ ಇಂಡೋನೇಶ್ಯದಲ್ಲಿ ಪ್ರಶಸ್ತಿ ಕೈತಪ್ಪಿತ್ತು.
ಸೈನಾಗೆ ಕಾಡುತ್ತಿದೆ ಗಾಯದ ಸಮಸ್ಯೆ: ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಮೇದೋಜ್ಜೀರಕ ಗ್ರಂಥಿಯ ಉರಿಯೂತ ಹಾಗೂ ಇತರ ಹಲವು ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದು ಮಲೇಶ್ಯ ಓಪನ್, ನ್ಯೂಝಿಲ್ಯಾಂಡ್ ಓಪನ್, ಸುದಿರ್ಮನ್ ಕಪ್ ಹಾಗೂ ಚೀನಾ ಓಪನ್ನ ಮೊದಲ ಸುತ್ತಿನಲ್ಲಿ ಸೋತಿದ್ದಾರೆ.
8ನೇ ಶ್ರೇಯಾಂಕದ ಸೈನಾ ಕೊರಿಯಾದ ಕಿಮ್ ಗಾವುನ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಹೈದರಾಬಾದ್ನ 29ರ ಹರೆಯದ ಸೈನಾ ಅವರು ಕಿಮ್ ವಿರುದ್ಧ ಈತನಕ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಕಾಯ್ದುಕೊಂಡಿದ್ದಾರೆ. ಕೊರಿಯಾ ವಿರುದ್ಧ ಗೆಲುವಿನ ಓಟ ಮುಂದುವರಿಸಿದರೆ ಸೈನಾಗೆ ಇಂಡೋನೇಶ್ಯದ ಗ್ರೆಗೊರಿಯ ಮರಿಸ್ಕಾ ಟುನ್ಜಂಗ್ ಸವಾಲು ಎದುರಾಗಲಿದೆ.
ಉತ್ತಮ ಪ್ರದರ್ಶನದತ್ತ ಪ್ರಣೀತ್ ಚಿತ್ತ: ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಜಯಿಸಿ ಭಾರತದ 36 ವರ್ಷಗಳ ಪದಕದ ಬರ ನೀಗಿಸಿದ್ದ ಬಿ.ಸಾಯಿ ಪ್ರಣೀತ್ ಕಳೆದ ವಾರ ಚೀನಾ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತನಕ ತಲುಪಿದ್ದರು. ಕೊರಿಯಾ ಓಪನ್ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸುವತ್ತ ಚಿತ್ತವಿರಿಸಿದ್ದಾರೆ.
ಪ್ರಣೀತ್ ಅಪಾಯಕಾರಿ ಎದುರಾಳಿ, ಐದನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್ಸೆನ್ ಸವಾಲು ಎದುರಿಸಲಿದ್ದಾರೆ. ಡೆನ್ಮಾರ್ಕ್ ನ ಅಂಟೊನ್ಸೆನ್ ಕಳೆದ ತಿಂಗಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಜಯಿಸಿದ್ದರು.
ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ವಾಲಿಫೈಯರ್ರನ್ನು ಎದುರಿಸಲಿದ್ದಾರೆ.
ಕಳೆದ ತಿಂಗಳು ಥಾಯ್ಲೆಂಡ್ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ವಿಶ್ವದ ಅಗ್ರ-10 ಡಬಲ್ಸ್ ಆಟಗಾರರಾಗಿ ಹೊರಹೊಮ್ಮಿದ್ದ ಸಾತ್ವಿಕ್ಸಾಯಿರಾಜ್ ರಾನಿಕ್ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ನ ಮೊದಲ ಸುತ್ತಿನಲ್ಲಿ ಜಪಾನ್ನ ನಾಲ್ಕನೇ ಶ್ರೇಯಾಂಕದ ಜೋಡಿ ಟಕೆಶಿ ಕಮುರ ಹಾಗೂ ಕೆಗೊ ಸೊನೊಡಾರನ್ನು ಎದುರಿಸಲಿದ್ದಾರೆ.
ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕ್ವಾಲಿಫೈಯಿಂಗ್ ಜೋಡಿಯನ್ನು ಎದುರಿಸಲಿದ್ದಾರೆ.