ಅಗ್ರಸ್ಥಾನ ಕಳೆದುಕೊಂಡ ಗಾಯಾಳು ಸ್ಮೃತಿ ಮಂಧಾನ
ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್
ದುಬೈ,ಅ.15: ಭಾರತದ ಗಾಯಗೊಂಡಿರುವ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ನ್ಯೂಝಿಲ್ಯಾಂಡ್ನ ಆಟಗಾರ್ತಿ ಆ್ಯಮಿ ಸ್ಯಾಟರ್ಥ್ವೇಟ್ ನಂ.1 ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಸ್ಮತಿ ಮಂಧಾನ ಸೋಮವಾರ ಕೊನೆಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಏಕದಿನ ಸರಣಿಯಿಂದ ಹೊರಗುಳಿದಿದ್ದರು. 755 ಅಂಕ ಗಳಿಸಿರುವ ಸ್ಮತಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆರಂಭಕ್ಕೆ ಮೊದಲು 23ರ ಹರೆಯದ ಮಂಧಾನ ನೆಟ್ ಪ್ರಾಕ್ಟೀಸ್ ನಿರತರಾಗಿದ್ದಾಗ ಬಲಗಾಲಿನ ಬೆರಳಿಗೆ ಚೆಂಡು ಬಡಿದು ಗಾಯವಾಗಿತ್ತು. ಭಾರತದ ಇತರ ಬ್ಯಾಟ್ಸ್ವುಮೆನ್ಗಳ ಪೈಕಿ ನಾಯಕಿ ಮಿಥಾಲಿ ರಾಜ್ ಏಳನೇ ಸ್ಥಾನಕ್ಕೇರಿದರೆ, ಹರ್ಮನ್ಪ್ರೀತ್ ಕೌರ್ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನಕ್ಕೇರಿದರು. ಬೌಲರ್ಗಳ ರ್ಯಾಂಕಿಂಗ್ನಲ್ಲಿ ಜುಲನ್ ಗೋಸ್ವಾಮಿ, ಶಿಖಾ ಪಾಂಡೆ ಹಾಗೂ ಪೂನಂ ಯಾದವ್ ಕ್ರಮವಾಗಿ ಆರನೇ, 8ನೇ ಹಾಗೂ 9ನೇ ರ್ಯಾಂಕಿಗೆ ತಲುಪಿದ್ದಾರೆ.ಆಲ್ರೌಂಡರ್ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಮೂರನೇ ಸ್ಥಾನಕ್ಕೇರಿದರೆ, ಶಿಖಾ ಪಾಂಡೆ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.