ಮಾರ್ಷ್ಗೆ ಗಾಯ, ಸ್ವದೇಶಕ್ಕೆ ವಾಪಸ್
ಸಿಡ್ನಿ, ಆ.30: ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಶಾನ್ ಮಾರ್ಷ್ ಶ್ರೀಲಂಕಾ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಕಿರು ಬೆರಳು ಮುರಿತಕ್ಕೊಳಗಾದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
‘‘ಶಾನ್ ಮೂರನೆ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕಿರು ಬೆರಳು ಮುರಿದಿದೆ. ಪಂದ್ಯದ ಬಳಿಕ ನಡೆಸಲಾದ ಎಕ್ಸ್ರೇಯಲ್ಲಿ ಬೆರಳು ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಗಾಯದಿಂದ ಚೇತರಿಸಿಕೊಳ್ಳಲು ಅವರಿಗೆ ಪರ್ತ್ಗೆ ವಾಪಸಾಗಲು ಅವಕಾಶ ನೀಡಲಾಗಿದೆ’’ ಎಂದು ಫಿಸಿಯೋ ಡೇವಿಡ್ ಬಿಕ್ಲೇ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾರ್ಷ್ ಬದಲಿಗೆ ಉಸ್ಮಾನ್ ಖ್ವಾಜಾರನ್ನು ಆಸ್ಟ್ರೇಲಿಯ ಆಯ್ಕೆಗಾರರು ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಖ್ವಾಜಾ ಪ್ರಸ್ತುತ ಶ್ರೀಲಂಕಾದಲ್ಲಿರುವ ಆಸ್ಟ್ರೇಲಿಯದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಷ್ ಶ್ರೀಲಂಕಾ ಪ್ರವಾಸದ ಮಧ್ಯದಲ್ಲೇ ಸ್ವದೇಶಕ್ಕೆ ವಾಪಸಾಗುತ್ತಿರುವ ಆಸೀಸ್ನ ಎರಡನೆ ಆಟಗಾರ. ಕಳೆದ ವಾರ ವೇಗದ ಬೌಲರ್ ನಥನ್ ಕೌಲ್ಟರ್-ನೀಲ್ ಬೆನ್ನು ಮೂಳೆಗೆ ಆಗಿರುವ ನೋವಿನಿಂದಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ.