ಮಲೇಷ್ಯಾದ ಮೊಹಮ್ಮದ್ ಫೈಝ್ ಗೆ ಫಿಫಾ ಶ್ರೇಷ್ಠ ಗೋಲು ಪ್ರಶಸ್ತಿ
ಝುರಿಕ್, ಜ.10: ಮಲೇಷ್ಯಾದ ಫುಟ್ಬಾಲ್ ಸ್ಟಾರ್ ಮೊಹಮ್ಮದ್ ಫೈಝ್ ಸುಬ್ರಿ ಫಿಫಾದ ಪ್ರತಿಷ್ಠಿತ ಶ್ರೇಷ್ಠ ಗೋಲು ದಾಖಲಿಸಿದವರಿಗೆ ನೀಡಲಾಗುವ ಪ್ರಶಸ್ತಿ 2016ರ ಸಾಲಿನ ಪುಸ್ಕಸ್ ಅವಾರ್ಡ್ಗೆ ಭಾಜನರಾಗಿದ್ದಾರೆ.
ಮಲೇಷ್ಯಾ ಪರ ಇದೇ ಮೊದಲ ಬಾರಿ ಮೊಹಮ್ಮದ್ ಫೈಝ್ ಈ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ
ಕಳೆದ ಫೆಬ್ರವರಿಯಲ್ಲಿ ಮಲೇಷ್ಯನ್ ಸೂಪರ್ ಲೀಗ್ನಲ್ಲಿ ಪಹಾಂಗ್ ಸ್ಟೇಟ್ ವಿರುದ್ಧದ ಪಂದ್ಯದಲ್ಲಿ ಫ್ರೀ-ಕಿಕ್ನಲ್ಲಿ ಬಾರಿಸಿದ ಗೋಲು 29ರ ಹರೆಯದ ಪೆನಾಂಗ್ ಸ್ಟಾರ್ ಮೊಹಮ್ಮದ್ ಫೈಝ್ ಸುಬ್ರಿ ಅವರಿಗೆ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಅವರು ಶೇ 60ರಷ್ಟು ಮತಗಳನ್ನು ಪಡೆದು ಪುಸ್ಕಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಬ್ರೆಝಿಲ್ನ ಫುಟ್ಬಾಲ್ ದಂತಕಥೆ ರೊನಾಲ್ಡೊ ಅವರು ಮೊಹಮ್ಮದ್ ಫೈಝ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
‘‘ ನನಗೆ ಬಹಳ ಸಂತಸವಾಗಿದೆ. ನಾನು ಈ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ನನ್ನ ವೃತ್ತಿ ಬದುಕಿನಲ್ಲಿ ಇಂತಹ ಪ್ರಶಸ್ತಿಯನ್ನು ಈ ವರೆಗೆ ಪಡೆದಿಲ್ಲ. ಈ ಪ್ರಶಸ್ತಿಯನ್ನು ನನ್ನ ಕುಟುಂಬ, ಸ್ನೇಹಿತರು ಮತ್ತು ದೇಶಕ್ಕೆ ಅರ್ಪಿಸುವೆನು’’ ಎಂದು ಪೆನಾಂಗ್ ಎಫ್ಎ ತಂಡದ ಆಟಗಾರ ಫೈಝ್ ಅಭಿಪ್ರಾಯಪಟ್ಟಿದ್ದಾರೆ.