ಸೈನಾ ನೆಹ್ವಾಲ್ ಫೈನಲ್ಗೆ ಪ್ರವೇಶ
ಮಲೇಷ್ಯಾ ಮಾಸ್ಟರ್ಸ್ ಜಿಪಿ ಬ್ಯಾಡ್ಮಿಂಟನ್ ಟೂರ್ನಿ
ಸರವಾಕ್(ಮಲೇಷ್ಯಾ), ಜ.21: ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಗ್ರಾನ್ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ಕೇವಲ 32 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ ಸೈನಾ ಅವರು ಮಲೇಷ್ಯಾದ ಯುಯಿ ಪುಯಿ ಯಿನ್ ವಿರುದ್ಧ 21-13, 21-10 ಗೇಮ್ಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸಿದರು. ಈ ಮೂಲಕ ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ತೇರ್ಗಡೆಯಾದರು.
ಫೈನಲ್ನಲ್ಲಿ ಥಾಯ್ಲೆಂಡ್ನ 18ರ ಹರೆಯದ ಆಟಗಾರ್ತಿ ಪಾರ್ನ್ಪಾವೀ ಚಾಚುವಾಂಗ್ರನ್ನು ಎದುರಿಸಲಿದ್ದಾರೆ.
ಯಿನ್ ಮೊದಲ ಗೇಮ್ನ ಆರಂಭದಲ್ಲಿ 7-5 ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿದ್ದರು. ಒಂದು ಹಂತದಲ್ಲಿ 11-5 ಮುನ್ನಡೆಯಲ್ಲಿದ್ದರು. ಆಗ ಮರು ಹೋರಾಟ ನೀಡಿದ ಸೈನಾ ಸತತ ಆರು ಅಂಕವನ್ನು ಬಾಚಿಕೊಂಡು 21-13 ಅಂತರದಿಂದ ಮೊದಲ ಗೇಮ್ ವಶಪಡಿಸಿಕೊಂಡರು.
ಎರಡನೆ ಗೇಮ್ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಸೈನಾ ಮೊದಲ ಆರು ಅಂಕವನ್ನು ಗಳಿಸಿ 11-5 ಲೀಡ್ ಪಡೆದರು. ಅಂತಿಮವಾಗಿ 21-10 ಅಂತರದಿಂದ ಸುಲಭವಾಗಿ ಗೆಲುವು ಸಂಪಾದಿಸಿದ ಸೈನಾ ರವಿವಾರ ನಡೆಯಲಿರುವ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.