ಕೆಕೆಆರ್ಗೆ 82 ರನ್ಗಳ ರೋಚಕ ಜಯ
ಕೋಲ್ಕತಾ, ಎ.23: ಇಲ್ಲಿ ನಡೆದ ಐಪಿಎಲ್ನ 27ನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 82 ರನ್ಗಳ ಭರ್ಜರಿ ಜಯ ಗಳಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 132 ರನ್ಗಳ ಸವಾಲನ್ನು ಪಡೆದ ರಾಯಲ್ ಚಾಲೆಂಜರ್ಸ್ ತಂಡ 9.4 ಓವರ್ಗಳಲ್ಲಿ 49 ರನ್ಗಳಿಗೆ ಆಲೌಟಾಗಿದೆ. ಕೋಲ್ಕತಾ ತಂಡದ ಕೌಲ್ಟರ್ ನೀಲ್ ಪಂದ್ಯಶ್ರೇಷ್ಠ ಪ್ರಶ್ಸತಿ ಪಡೆದರು. ಗ್ರಾಂಡ್ಹೊಮೆ (4ಕ್ಕೆ 3), ವೋಕ್ಸ್ (6ಕ್ಕೆ 3), ಕೌಲ್ಟರ್ ನೀಲ್(21ಕ್ಕೆ 3), ಉಮೇಶ್ ಯಾದವ್(15ಕ್ಕೆ 1) ದಾಳಿಗೆ ತತ್ತರಿಸಿದ ಆರ್ಸಿಬಿ ಪರ ಯಾವನೇ ಒಬ್ಬ ಆಟಗಾರನಿಗೆ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಕೇದಾರ್ ಜಾಧವ್(9) ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇವರನ್ನು ಹೊರತುಪಡಿಸಿದರೆ ಎಬಿಡಿವಿಲಿಯರ್ಸ್(8), ಸ್ಟುವರ್ಟ್ ಬಿನ್ನಿ(8), ಗೇಲ್ (7),ಮನದೀಪ್ ಸಿಂಗ್(1), ಪವನ್ ನೇಗಿ(2), ಮಿಲ್ಸ್ (2), ಎಸ್.ಅರವಿಂದ್(ಔಟಾಗದೆ 5) ಕಳಪೆ ಪ್ರದರ್ಶನ ನೀಡಿದರು.
ನಾಯಕ ವಿರಾಟ್ ಕೊಹ್ಲಿ(0), ಬದ್ರಿ (0) ಮತ್ತು ಚಾಹಲ್(0) ಖಾತೆ ತೆರೆಯಲಿಲ್ಲ.
ಕೋಲ್ಕತಾ 131: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಕೋಲ್ಕತಾ ತಂಡದ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಚಾಹಲ್(16ಕ್ಕೆ 3), ನೇಗಿ(15ಕ್ಕೆ 2), ಮಿಲ್ಸ್(31ಕ್ಕೆ 2), ಬದ್ರಿ(33ಕ್ಕೆ 1), ಅರವಿಂದ್(27ಕ್ಕೆ 1) ಮತ್ತು ಬಿನ್ನಿ(9ಕ್ಕೆ 1) ದಾಳಿಗೆ ಸಿಲುಕಿ 19.3 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟಾಗಿತ್ತು. ಮಳೆಯಿಂದಾಗಿ ಪಂದ್ಯ ಅರ್ಧಗಂಟೆ ತಡವಾಗಿ ಆರಂಭಗೊಂಡಿತ್ತು. ಕೋಲ್ಕತಾ ತಂಡದ ಆರಂಭ ಚೆನ್ನಾಗಿತ್ತು. ನರೇನ್ (34) ಮತ್ತು ನಾಯಕ ಗಂಭೀರ್(14) ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ಗೆ 3.4 ಓವರ್ಗಳಲ್ಲಿ ಮೊದಲ ವಿಕೆಟ್ಗೆ 48 ರನ್ ಜಮೆ ಮಾಡಿದ್ದರು.
ಉತ್ತಪ್ಪ(11), ಮನೀಷ್ ಪಾಂಡೆ(15), ಸೂರ್ಯಕುಮಾರ್ ಯಾದವ್(15), ವೋಕ್ಸ್(18) ಎರಡಂಕೆಯ ಸ್ಕೋರ್ ದಾಖಲಿಸಿದರು.