ಬೋಪಣ್ಣಗೆ ಚೊಚ್ಚಲ ಗ್ರಾನ್ಸ್ಲಾಮ್ ಪ್ರಶಸ್ತಿ
ಪ್ಯಾರಿಸ್, ಜೂ.8: ‘ಕೊಡಗಿನ ಕುವರ’ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಟ್ರೋಫಿಯನ್ನು ಜಯಿಸುವ ಮೂಲಕ ಚೊಚ್ಚಲ ಗ್ರಾನ್ಸ್ಲಾಮ್ ಪ್ರಶಸ್ತಿಯ ಒಡೆಯನಾಗಿದ್ದಾರೆ.
ಇಲ್ಲಿ ಗುರುವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಕೆನಡಾದ ಜೊತೆಗಾರ್ತಿ ಗಾಬ್ರಿಯೆಲಾ ಡಾಬ್ರೊಸ್ಕಿ ಜೊತೆಗೂಡಿ ಈ ಸಾಧನೆ ಮಾಡಿದ ಬೋಪಣ್ಣ ಅವರು ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಝಾ ಬಳಿಕ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿದ ಭಾರತದ ನಾಲ್ಕನೆ ಟೆನಿಸ್ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ವೃತ್ತಿಜೀವನದಲ್ಲಿ ಎರಡನೆ ಬಾರಿ ಗ್ರಾನ್ಸ್ಲಾಮ್ ಟೂರ್ನಿಯ ಫೈನಲ್ನಲ್ಲಿ ಆಡಿದ ಏಳನೆ ಶ್ರೇಯಾಂಕದ ಬೋಪಣ್ಣ ಅವರು ಡಾಬ್ರೊಸ್ಕಿ ಜೊತೆಗೂಡಿ ಜರ್ಮನಿಯ ಅನ್ನಾ-ಲೆನಾ ಗ್ರೊನ್ಫೆಲ್ಡ್ ಹಾಗೂ ಕೊಲಂಬಿಯಾದ ರಾಬರ್ಟ್ ಫರ್ಹಾ ಅವರನ್ನು 2-6, 6-2, 12-10 ಸೆಟ್ಗಳ ಅಂತರದಿಂದ ಮಣಿಸಿದರು.
ಬೋಪಣ್ಣ 2010ರಲ್ಲಿ ಯುಎಸ್ ಓಪನ್ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಐಸಾಮ್ ಉಲ್-ಹಕ್ ಖುರೇಶಿ ಜೊತೆಗೂಡಿ ಫೈನಲ್ಗೆ ತಲುಪಿದ್ದರು. ಫೈನಲ್ನಲ್ಲಿ ಬೋಪಣ್ಣ -ಖುರೇಶಿ ಅಮೆರಿಕದ ಅವಳಿ ಸಹೋದರರಾದ ಬಾಬ್ ಹಾಗೂ ಮೈಕ್ ಬ್ರಿಯಾನ್ ವಿರುದ್ಧ ಸೋಲುವ ಮೂಲಕ ರನ್ನರ್-ಅಪ್ಗೆ ತೃಪ್ತಿಪಟ್ಟಿದ್ದರು.