ಪ್ರೊ ಕಬಡ್ಡಿ ಲೀಗ್ -5: ಟ್ರೋಫಿ ಅನಾವರಣ
ಮೊದಲ ಪಂದ್ಯದಲ್ಲಿ ತಮಿಳ್-ತೆಲುಗು ತಂಡ ಮುಖಾಮುಖಿ
ಚೆನ್ನೈ,ಜು.27: ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಶುಕ್ರವಾರ ಆರಂಭವಾಗಲಿದ್ದು, ಎಲ್ಲ 12 ಕಬಡ್ಡಿ ತಂಡಗಳ ನಾಯಕರ ಸಮ್ಮುಖದಲ್ಲಿ ಗುರುವಾರ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ನಾಯಕರಾದ ಅನೂಪ್ ಕುಮಾರ್, ರಾಹುಲ್ ಚೌಧರಿ, ಅಜಯ್ ಠಾಕೂರ್, ನಿತಿನ್ ಥೋಮರ್ ಸಹಿತ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಮಿರಾಜ್ ಶೇಕ್ ಈ ಸಂದರ್ಭದಲ್ಲಿ ಹಾಜರಿದ್ದರು.
ಶುಕ್ರವಾರ ಹೈದರಾಬಾದ್ನಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್ನ ಮೊದಲ ಪಂದ್ಯದಲ್ಲಿ ಅಜಯ್ ಠಾಕೂರ್ ನೇತೃತ್ವದ ಹೊಸ ತಂಡ ತಮಿಳ್ ತಲೈವಾಸ್ ರಾಹುಲ್ ಚೌಧರಿ ನಾಯಕತ್ವದ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಐದನೆ ಆವೃತ್ತಿಯ ಲೀಗ್ನ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಕ್ಷೇತ್ರದ ಐಕಾನ್ಗಳು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ಕುಮಾರ್ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಈ ಋತುವಿನ ಮೊದಲ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. 13 ವಾರಗಳ ಕಾಲ ನಡೆಯಲಿರುವ ಕಬಡ್ಡಿ ಲೀಗ್ನಲ್ಲಿ 138 ಪಂದ್ಯಗಳು ನಡೆಯುತ್ತವೆ. 8 ಕೋ.ರೂ. ಬಹುಮಾನ ಹಾಗೂ ಟ್ರೋಫಿಗಾಗಿ 12 ತಂಡಗಳು ಸೆಣಸಾಡಲಿವೆ.