ವಿಶ್ವ ಚಾಂಪಿಯನ್ಶಿಪ್: ಸಿಂಧು, ಸೈನಾಗೆ ಬೈ
ಹೊಸದಿಲ್ಲಿ, ಆ.9: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪಡೆದ ಪಿ.ವಿ.ಸಿಂಧು ಮತ್ತು ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಅಗಸ್ಟ್ 21ರಂದು ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಎರಡನೆ ಸುತ್ತಿಗೆ ಬೈ ಪಡೆದಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿ ಕಂಚು ಪಡೆದಿದ್ದ ಸಿಂಧು ಕೊರಿಯಾದ ಕಿಮ್ ಹ್ಯೂ ಮಿನ್ ಅಥವಾ ಈಜಿಪ್ಟ್ನ ಹಾದಿಯಾ ಹೊಸ್ನಿ ಅವರನ್ನು ಎರಡನೆ ಸುತ್ತಿನಲ್ಲಿ ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಸನ್ ಯು ಅವರನ್ನು ಎದುರಿಸುವುದನ್ನು ನಿರೀಕ್ಷಿಸಲಾಗಿದೆ.
2015ರ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪಡೆದ ಸೈನಾ ಅವರು ಸ್ವಿಸ್ನ ಸಬರಿನಾ ಜಾಕ್ಯುಟ್ ಅಥವಾ ಉಕ್ರೈನ್ನ ನಟಾಲಿಯಾ ವೊಯ್ಟಿಸೆಕ್ರನ್ನು ಎದುರಿಸಲಿದ್ದಾರೆ.
ಸೈನಾಗೆ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಕೊರಿಯಾದ ಎರಡನೆ ಶ್ರೇಯಾಂಕದ ಸಂಗ್ ಜಿ ಹ್ಯೂನ್ ಸವಾಲು ಎದುರಾಗುವ ಸಾಧ್ಯತೆ ಇದೆ. ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯ ಚಾಂಪಿಯನ್ ಮತ್ತು ಸಿಂಗಾಪುರ ಓಪನ್ನಲ್ಲಿ ಎರಡನೆ ಸ್ಥಾನ ಪಡೆದಿರುವ ಕೆ.ಶ್ರೀಕಾಂತ್ ಅವರು ರಷ್ಯಾದ ಸೆರ್ಗೆ ಸಿರೆಂಟ್ ಸವಾಲನ್ನು ಎದುರಿಸಲಿದ್ದಾರೆ.
ಸಿಂಗಾಪುರ ಓಪನ್ ಸೂಪರ್ ಸಿರೀಸ್ನಲ್ಲಿ ಶ್ರೀಕಾಂತ್ರನ್ನು ಮಣಿಸಿ ಚೊಚ್ಚಲ ಚಾಂಪಿಯನ್ ಆಗಿರುವ ಬಿ. ಸಾಯ್ ಪ್ರಣೀತ್ ಅವರು ಹಾಂಕಾಂಗ್ನ ವೈ ನಾನ್ರನ್ನು ಮತ್ತು ಅಜಯ್ ಜಯರಾಮ್ ಅವರು ಆಸ್ಟ್ರೀಯದ ಲುಕಾ ರಾಬರ್ ಅವರನ್ನು ಎದುರಿಸಲಿರುವರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿ ಆಡುತ್ತಿರುವ ಸಮೀರ್ ವರ್ಮಾ ಅವರಿಗೆ ಸ್ಪೇನ್ನ ಪಾಬ್ಲೊ ಅಬಿಯಾನ್ ಸವಾಲು ಎದುರಾಗಲಿದೆ.
ಮಹಿಳೆಯರ ಸಿಂಗಲ್ಸ್ನಲ್ಲಿ ರಿತುಪರ್ಣ ದಾಸ್ ಅವರು ಫಿನ್ಲ್ಯಾಂಡ್ನ ಏರಿ ಮಿಕ್ಕಿಲಾರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು. ತನ್ವಿ ಲಾಡ್ ಅವರು ಇಂಗ್ಲೆಂಡ್ನ ಕ್ಲೋಯ್ ಬರ್ಚ್ರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಅವರು ಕೊರಿಯಾದ ಮಹಿಳೆಯರ ಡಬಲ್ಸ್ನಲ್ಲಿ ಕೊರಿಯಾದ ಚುಂಗ್ ಈಯಿ ಸಿಯೋಕ್ ಮತ್ತು ಕಿಮ್ ಡ್ಯುಕ್ಯಾಂಗ್ ಸವಾಲು ಎದುರಿಸುವರು.
ಸಾತ್ವಿಕ್ಸಾಯ್ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಜಪಾನ್ನ ಹಿರೊಯುಕಿ ಎಂಡೋ ಮತ್ತು ಯುಟಾ ವಾಟಾನಬೆ ಕಾಂಬೊ ಜೋಡಿಯ ಸವಾಲು ಎದುರಾಗಲಿದೆ.
ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ಅವರು ಇಂಡೋನೇಷ್ಯಾದ ರಿರಿನ್ ಅಮೆಲಿಯ ಮತ್ತು ಮಲೇಷ್ಯಾದ ಅನ್ನಾ ಚಿಂಗ್ ಯಿಕ್ ಚಿಯಾಂಗ್ರನ್ನು ಪ್ರಥಮ ಸುತ್ತಿನಲ್ಲಿ ಎದುರಿಸುವರು.
ಮಿಶ್ರ ಡಬಲ್ಸ್ನಲ್ಲಿ 15ನೆ ಶ್ರೇಯಾಂಕದ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಅವರಿಗೆ ಬೈ ಲಭಿಸಿದ್ದು ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಚಿಯಾಂಗ್ ಕೈ ಹ್ಸಿನ್ ಅಥವಾ ಯೋಗೆಂದ್ರನ್ ಕೃಷ್ಣನ್ ಮತ್ತು ಪ್ರಜಕ್ತಾ ಸಾವಂತ್ ಸವಾಲು ಎದುರಿಸಲಿದ್ದಾರೆ.