ಹಾಕಿ ಇಂಡಿಯಾ ಮುಖ್ಯ ಕೋಚ್ ಒಲ್ಟಮನ್ಸ್ ಉಚ್ಚಾಟನೆ
ಹೊಸದಿಲ್ಲಿ, ಸೆ.2:ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿ ನಿರ್ವಹಣೆ ತೋರಲು ವಿಫಲವಾಗಿರುವ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ರನ್ನು ಹಾಕಿ ಇಂಡಿಯಾ ಶನಿವಾರ ಉಚ್ಚಾಟನೆ ಮಾಡಿದೆ.
ಹೊಸ ಕೋಚ್ ಆಯ್ಕೆಯಾಗುವ ತನಕ ಉನ್ನತ ಪ್ರದರ್ಶನ ನಿರ್ದೇಶಕ ಡೇವಿಡ್ ಜಾನ್ ಉಸ್ತುವಾರಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಶನಿವಾರ ಕೊನೆಗೊಂಡ ಹಾಕಿ ಇಂಡಿಯಾದ ಉನ್ನತ ಪ್ರದರ್ಶನ ಹಾಗೂ ಅಭಿವೃದ್ಧಿ ಸಮಿತಿಯ ಮೂರು ದಿನಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ರನ್ನು ಉಚ್ಚಾಟಿಸುವುದು ಸೇರಿದಂತೆ ಕೆಲವು ಮುಖ್ಯ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಮುಖ್ಯ ಕೋಚ್ ಆಗಿ ತಂಡದ ಒಟ್ಟಾರೆ ಫಿಟ್ನೆಸ್ ಬೆಳವಣಿಗೆಯಲ್ಲಿ ಪ್ರಗತಿಯಾಗಿದೆ. ಆದರೆ, ತಂಡದ ಪ್ರದರ್ಶನ ಅಸ್ಥಿರವಾಗಿದ್ದು, ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಹಾಕಿ ಇಂಡಿಯಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
‘‘2016 ಹಾಗೂ 2017ರಲ್ಲಿ ಭಾರತದ ಪುರುಷರ ಹಾಕಿ ತಂಡದ ಪ್ರದರ್ಶನದ ಬಗ್ಗೆ ಸಮಿತಿ ಸದಸ್ಯರಿಗೆ ತೃಪ್ತಿಯಾಗಿಲ್ಲ. ಏಷ್ಯಾದಲ್ಲಿ ಉತ್ತಮ ಪ್ರದರ್ಶನ ನೀಡುವುದು ಯಶಸ್ಸಿನ ಸಂಕೇತವಲ್ಲ’’ ಎಂದು ಹಾಕಿ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಹರಿಂದರ್ ಸಿಂಗ್ ಹೇಳಿದ್ದಾರೆ.