ನೋಟ್ಬ್ಯಾನ್ ಬಳಿಕ ಏರ್ಪೋರ್ಟ್ಗಳಲ್ಲಿ ಜಪ್ತಿಯಾದ ನಗದು,ಚಿನ್ನ,ಬೆಳ್ಳಿ ಎಷ್ಟು ಗೊತ್ತೇ?
ಹೊಸದಿಲ್ಲಿ, ನ.10: ಗರಿಷ್ಠ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕದ ಒಂದು ವರ್ಷದ ಅವಧಿಯಲ್ಲಿ ಭಾರತದಾದ್ಯಂತವಿರುವ ವಿಮಾನನಿಲ್ದಾಣಗಳಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)87 ಕೋ.ರೂ.ಗೂ ಅಧಿಕ ಶಂಕಾಸ್ಪದ ಹಣ, 2,600 ಕೆಜಿಗೂ ಹೆಚ್ಚಿನ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಹಣಕಾಸು ಸಚಿವಾಲಯದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸಂಶಯಾಸ್ಪದ ನಗದು ಹಾಗೂ ಇತರ ವಸ್ತುಗಳ ಚಲಾವಣೆಯ ಮೇಲೆ ನಿಗಾಇಟ್ಟಿರುವ ಸಿಐಎಸ್ಎಫ್ ದೇಶದ 59 ನಾಗರಿಕ ವಿಮಾನನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ತಪಾಸಣೆ ನಡೆಸಿತ್ತು.
ಸಿಐಎಸ್ಎಫ್ ನೀಡಿರುವ ಅಂಕಿ-ಅಂಶದನ್ವಯ 2015ರ ನ.8 ಹಾಗೂ 2017ರ ನ.7ರ ನಡುವೆ ಭದ್ರತಾ ಪಡೆಯು 87.17 ಕೋಟಿ ರೂ. ಶಂಕಾಸ್ಪದ ಹಣವನ್ನು ವಶಪಡಿಸಿಕೊಂಡಿದೆ. 1,491.5 ಕೆಜಿ ಚಿನ್ನ ಹಾಗೂ 572.63 ಕೆಜಿ ತೂಕದ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ಮುಂಬೈ ಏರ್ಪೋರ್ಟ್ವೊಂದರಲ್ಲೇ 33 ಕೋ.ರೂ. ಶಂಕಾಸ್ಪದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದಿಲ್ಲಿಯ ಇಂದಿರಾಗಾಂಧಿ ಇಂಟರ್ನ್ಯಾಶನಲ್ ಏರ್ಪೋರ್ಟ್ವೊಂದರಿಂದಲೇ 498 ಕೆಜಿಗೂ ಅಧಿಕ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಜೈಪುರದ ಏರ್ಪೋರ್ಟ್ನಲ್ಲಿ 266 ಕೆಜಿಗೂ ಅಧಿಕ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಂಕಿ-ಅಂಶ ಹೇಳುತ್ತಿದೆ.
ವಶಕ್ಕೆ ಪಡೆದಿರುವ ಅಕ್ರಮ ನಗದು ಹಾಗೂ ಕೆಜಿಗಟ್ಟಲೆ ಚಿನ್ನ-ಬೆಳ್ಳಿಯನ್ನು ಕಾನೂನು ಪ್ರಕಾರ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಸಿಐಎಸ್ಎಫ್ ವಕ್ತಾರರು ತಿಳಿಸಿದ್ದಾರೆ.