ಬಾಲಕಿಯನ್ನು 3.5 ಲಕ್ಷ ರೂ.ಗೆ ಮಾರಾಟಕ್ಕಿಟ್ಟಿದ್ದ ಇಬ್ಬರು ಆರೋಪಿಗಳ ಬಂಧನ
ಪಾಟ್ನಾ, ನ.24: 15ರ ಹರೆಯದ ಬಾಲಕಿಯನ್ನು 3.5 ಲಕ್ಷ ರೂ.ಗೆ ಮಾರಾಟ ಮಾಡಲು ಹೊರಟಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಬಾಲಕಿಯನ್ನು ಖರೀದಿಸುವ ಸೋಗಿನಲ್ಲಿ ತೆರಳಿದ್ದ ಪೊಲೀಸರು ಬಾಲಕಿಯನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸಂತ್ರಸ್ತೆಯನ್ನು ಬಿಹಾರದಲ್ಲಿರುವ ಆಕೆಯ ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.
ಬಾಲಕಿಯನ್ನು ಮದುವೆ ಮಾಡಿಸುವುದಾಗಿ ನಂಬಿಸಿ ಒಂದು ವರ್ಷದ ಹಿಂದೆ ಡೀಲರ್ವೊಬ್ಬ ಬಾಲಕಿಯನ್ನು ದಿಲ್ಲಿಗೆ ಕರೆ ತಂದಿದ್ದ.ಆನಂತರ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ.
ಬಾಲಕಿಯನ್ನು ಖರೀದಿಸುವ ನೆಪದಲ್ಲಿ ಸೆಂಟ್ರಲ್ ದಿಲ್ಲಿಯ ಕಮಲಾ ಮಾರುಕಟ್ಟೆಯಲ್ಲಿ ಇಬ್ಬರು ಆರೋಪಿಗಳನ್ನು ಭೇಟಿಯಾಗಿದ್ದ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿಗಳನ್ನು ಬಲೆಗೆ ಬೀಳಿಸುವ ಮೊದಲು ಪೊಲೀಸರು ಹಲವು ಬಾರಿ ಆರೋಪಿಗಳನ್ನು ಮಾರುವೇಶದಲ್ಲಿ ಭೇಟಿಯಾಗಿ ವ್ಯಾಪಾರ ಕುದುರಿಸಿದ್ದರು. ಬಂಧಿಸಲ್ಪಟ್ಟಿರುವ ಆರೋಪಿಗಳನ್ನು ಬಿಹಾರದ ಅಮರ್(24) ಹಾಗೂ ರಂಜಿತ್ ಶಾ(27) ಎಂದು ಗುರುತಿಸಲಾಗಿದೆ.