11 ವರ್ಷದ ಬಾಲಕಿಯ ಮೃತದೇಹ ಪತ್ತೆ: ದೇಹದ ಮೇಲೆ 86 ಗಾಯಗಳ ಗುರುತು
ಮತ್ತೊಂದು ಪೈಶಾಚಿಕ ಘಟನೆ
ಸೂರತ್, ಎ.14: ಕಥುವಾ ಪೈಶಾಚಿಕ ಘಟನೆ ಇನ್ನೂ ದೇಶದ ಜನರಿಗೆ ಘಾಸಿ ಮಾಡಿರುವ ನಡುವೆಯೇ ಅಂತಹದ್ದೇ ಮತ್ತೊಂದು ಘಟನೆಯ ಬಗ್ಗೆ ವರದಿಯಾಗಿದೆ. ಸೂರತ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, 11ರ ಹರೆಯದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಖಾಸಗಿ ಭಾಗಗಳು ಸೇರಿದಂತೆ ದೇಹದ ಮೇಲೆ 86 ಗಾಯಗಳಿವೆ ಎಂದು ವರದಿಯಾಗಿದೆ.
ಬಾಲಕಿ ಸಾವನ್ನಪ್ಪುವ ಮೊದಲು ಒಂದು ವಾರಗಳ ಕಾಲ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ ಎನ್ನಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದಯೇ ಎನ್ನುವುದನ್ನು ಖಚಿತಪಡಿಸಲು ಮಾದರಿಗಳನ್ನು ಫೋರೆನ್ಸಿಕ್ ಪರೀಕ್ಷೆಗಳಿಗೆ ಕಳುಹಿಸಲಾಗಿದೆ.
ಹೆಚ್ಚಿನ ಗಾಯಗಳು ಮರದ ಆಯುಧದಿಂದಾಗಿದೆ ಎಂದು ಸೂರತ್ ಸಿವಿಲ್ ಆಸ್ಪತ್ರೆಯ ಫೊರೆನ್ಸಿಕ್ ಮುಖ್ಯಸ್ಥ ಹೇಳಿದ್ದಾರೆ. “ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ನಮಗೆ ಆಕೆಯ ದೇಹದ ಮೇಲೆ ಒಂದರಿಂದ ಏಳು ದಿನಗಳೊಳಗಿನ ಗಾಯಗಳು ಪತ್ತೆಯಾದವು. ಆಕೆಯ ದೇಹದ ಮೇಲೆ 86 ಗಾಯಗಳಿವೆ” ಎಂದವರು ಮಾಹಿತಿ ನೀಡಿದ್ದಾರೆ.
ಎಪ್ರಿಲ್ 6ರಂದು ಬಾಲಕಿಯ ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದ್ದರು. ಆದರೆ ಇದುವರೆಗೂ ಬಾಲಕಿಯ ಗುರುತು ಪತ್ತೆಯಾಗಿಲ್ಲ.