ಸಾಮೂಹಿಕ ಅತ್ಯಾಚಾರ ವೀಡಿಯೊ ವೈರಲ್: ಅಪರಾಧಿಗಳ ಪತ್ತೆಗೆ ಜನರ ನೆರವು ಕೋರಿದ ಪೊಲೀಸರು
ಪಾಟ್ನಾ, ಮೇ 13: ನಾಲ್ವರು ಪುರುಷರು ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿರುವ ವೀಡಿಯೊ ಬಿಹಾರದಲ್ಲಿ ವೈರಲ್ ಆದ ಬಳಿಕ ಆರೋಪಿಗಳನ್ನು ಬಂಧಿಸಲು ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಮಹಿಳೆ ಬಿಟ್ಟು ಬಿಡುವಂತೆ ಕೋರಿಕೊಂಡರೂ ನಾಲ್ವರು ಪುರುಷರು ನಗುತ್ತಿರುವುದು ಹಾಗೂ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಆದರೆ, ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಹಾಗೂ ಅಪರಾಧಿಗಳು ಯಾರು ಎಂಬುದು ಸ್ಪಷ್ಟವಾಗಿಲ್ಲ. ಈ ಅಪರಾಧಕ್ಕೆ ಸಂಬಂಧಿಸಿ ಯಾವುದೇ ಮಾಹಿತಿ ಇಲ್ಲ ಹಾಗೂ ಯಾರೂ ದೂರು ದಾಖಲಿಸಲು ಮುಂದೆ ಬಂದಿಲ್ಲ.
ಈ ವೀಡಿಯೊದಲ್ಲಿ ಪುರುಷರು ಬಳಸುತ್ತಿರುವ ಭಾಷೆ ಆಧರಿಸಿದರೆ ಇದು ಗಯಾ ಹಾಗೂ ಇತರ ಜಿಲ್ಲೆಗಳನ್ನು ಒಳಗೊಂಡ ಮಗಧ ವಲಯವನ್ನು ಸೂಚಿಸುತ್ತದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿ ಶುಕ್ರವಾರ ವ್ಯಾಟ್ಸ್ ಆ್ಯಪ್ ಮೂಲಕ ಈ ವೀಡಿಯೊ ಸ್ವೀಕರಿಸಿತ್ತು. ಅನಂತರ ಈ ಎಫ್ಐಆರ್ ದಾಖಲಿಸುವಂತೆ ಹಾಗೂ ಅಪರಾಧಿಗಳನ್ನು ಬಂಧಿಸುವಂತೆ ಗಯಾ ಎಸ್ಎಸ್ಪಿ ರಾಜೀವ್ ಮಿಶ್ರಾರಿಗೆ ಸೂಚಿಸಲಾಗಿತ್ತು. ಆರೋಪಿಗಳನ್ನು ಗುರುತಿಸಲು ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಐವರು ಶಂಕಿತರ ಭಾವಚಿತ್ರವನ್ನು ಎಲ್ಲ ಸ್ಟೇಶನ್ ಹೌಸ್ ಅಧಿಕಾರಿಗಳು, ಚೌಕಿದಾರ್ ಹಾಗೂ ಜನಪ್ರತಿನಿಧಿಗಳ ನಡುವೆ ಪ್ರಸಾರ ಮಾಡಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ. ಅತ್ಯಾಚಾರಿಗಳನ್ನು ಗುರುತಿಸಲು ನೆರವು ನೀಡುವಂತೆ ಗಯಾ ಪೊಲೀಸರು ಜನರನ್ನು ಆಗ್ರಹಿಸಿದ್ದಾರೆ.