ಬೀದಿನಾಯಿಗಳ ದಾಳಿಗೆ ಎರಡರ ಬಾಲೆ ಬಲಿ
ಗಾಝಿಯಾಬಾದ್, ಮೇ 29: ಬೀದಿನಾಯಿಗಳ ದಾಳಿಗೆ ಎರಡು ವರ್ಷದ ಬಾಲಕಿಯೊಬ್ಬಳು ಬಲಿಯಾದ ಹೃದಯ ವಿದ್ರಾವಕ ಘಟನೆ ಇಲ್ಲಿನ ಮೋದಿ ನಗರದ ಭೀಮ್ ನಗರ ಎಂಬಲ್ಲಿ ನಡೆದಿದೆ. ಬೀದಿನಾಯಿಗಳ ದಾಳಿಯಿಂದ ಹಲವು ಗಾಯಗಳಾಗಿದ್ದ ಬಾಲಕಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಶಿವಾನಿಯಾ ಎಂಬ ಬಾಲಕಿ ಅಪರಾಹ್ನ 2:30ರಿಂದ ನಾಪತ್ತೆಯಾಗಿದ್ದಳು. ತೀವ್ರ ಹುಡುಕಾಟ ನಡೆಸಿದ ಬಳಿಕ ಆಕೆಯ ಮನೆಯ ಪಕ್ಕದ ಮೈದಾನದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಪತ್ತೆಯಾಗಿದ್ದಳು. ಬೀದಿನಾಯಿಗಳು ಆಕೆಯನ್ನು ಎಳೆದಾಡಿ ಹಲವು ಗಾಯಗಳಾಗಿದ್ದವು. ಬಾಲಕಿಯ ಮೇಲೆ ದಾಳಿ ಮಾಡಿದ ನಾಯಿಗಳು ಪಕ್ಕದ ಮೈದಾನಕ್ಕೆ ಆಕೆಯನ್ನು ಎಳೆದೊಯ್ದಿವೆ. ಸಂಜೆಯ ವೇಳೆಗೆ ಮೈದಾನದಲ್ಲಿ ಆಕೆಯ ದೇಹ ಪತ್ತೆಯಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಬಾಲಕಿಯ ತಂದೆ ಎಲೆಕ್ಟ್ರಿಶಿಯನ್ ಆಗಿದ್ದು, ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ತಾಯಿ ಪಾಯಲ್, ಆಟವಾಡುತ್ತಿದ್ದ ಮಗುವನ್ನು ಬಿಟ್ಟು ಹೊರ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. "ಆಕೆ ಆಡುತ್ತಿದ್ದ ಕಾರಣ ಅಲ್ಲೇ ಬಿಟ್ಟು ನೀರು ತರಲು ಮನೆ ಹಿಂದೆ ಹೋಗಿದ್ದೆ. ವಾಪಾಸ್ಸಾದಾಗ ಆಕೆ ನಾಪತ್ತೆಯಾಗಿದ್ದಳು. ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಮನೆ ಪಕ್ಕದ ಮೈದಾನದಲ್ಲಿ ಪತ್ತೆಯಾದಳು. ತಕ್ಷಣ ಆಕೆಯನ್ನು ಎತ್ತಿಕೊಂಡೆವು. ಆಗ ಕೂಡಾ ಒಂದು ನಾಯಿ ಆಕೆಯ ಮೇಲೆ ದಾಳಿಗೆ ಹವಣಿಸುತ್ತಿತ್ತು" ಎಂದು ಬಾಲಕಿಯ ಚಿಕ್ಕಮ್ಮ ಪೂನಮ್ ಹೇಳಿದ್ದಾರೆ.
ಬೀದಿನಾಯಿಗಳು ದಾಳಿ ಮಾಡಿ ಎಳೆದಾಡಿದ್ದರಿಂದ ತೀವ್ರ ಗಾಯಗಳಾಗಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಸ್ಥಳೀಯ ಪಾಲಿಕೆ ಸದಸ್ಯ ಸೇರಿದಂತೆ 25- 30 ಬಾಲಕಿಯನ್ನು ಕರೆತಂದಿದ್ದರು. ಆದರೆ ಆ ವೇಳೆಗಾಗಲೇ ನಾಯಿಗಳ ದಾಳಿಯಿಂದ ಆಕೆ ಮೃತಪಟ್ಟಿದ್ದಳು ಎಂದು ವೈದ್ಯ ಡಾ.ಸುಶೀಲ್ ಸಿದ್ದಾರ್ಥ ಹೇಳಿದ್ದಾರೆ.