ರೈಲ್ವೆ ಕಿಚನ್ಗಳಲ್ಲಿ ಏನು ತಯಾರಾಗುತ್ತಿದೆ ಎನ್ನುವುದನ್ನು ಐಆರ್ಸಿಟಿಸಿಯ ವೆಬ್ಸೈಟ್ನಿಂದ ತಿಳಿದುಕೊಳ್ಳಿ
ಹೊಸದಿಲ್ಲಿ,ಜೂ.15: ಅಡುಗೆ ತಯಾರಕರು ಮತ್ತು ಪ್ರಯಾಣಿಕರಿಗೆ ಪೂರೈಸಲಾಗುವ ಆಹಾರದ ಗುಣಮಟ್ಟದ ಮೇಲೆ ನಿಗಾಯಿರಿಸುವ ಕ್ರಮವಾಗಿ ತನ್ನ ಮೂಲ ಪಾಕಶಾಲೆಗಳ ವೀಡಿಯೊ ಫೂಟೇಜನ್ನು ನೇರ ಪ್ರಸಾರ ಮಾಡಲು ಭಾರತೀಯ ರೈಲ್ವೆಯು ನಿರ್ಧರಿಸಿದೆ.
ಪ್ರಯಾಣಿಕರು ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್(ಐಆರ್ಸಿಟಿಸಿ)ನ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ಈ ಲೈವ್ ಸ್ಟ್ರೀಮಿಂಗ್ನ್ನು ವೀಕ್ಷಿಸಬಹುದಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿರುವುದನ್ನು ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ. ಸುರಕ್ಷತೆಯೊಂದಿಗೆ ಪ್ರಯಾಣಿಕ ಸೌಲಭ್ಯಗಳನ್ನು ಹೆಚ್ಚಿಸುವ ತನ್ನ ಅಭಿಯಾನದ ಭಾಗವಾಗಿ ರೈಲ್ವೆಯು ಈ ಉಪಕ್ರಮವನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ದಿಲ್ಲಿ,ಮುಂಬೈ ಮತ್ತು ಭುವನೇಶ್ವರಗಳಂತಹ ಮುಖ್ಯ ಪಾಕಶಾಲೆಗಳು ಸೇರಿದಂತೆ ಐಆರ್ಸಿಟಿಸಿಯ 16 ಪಾಕಶಾಲೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕೇಟರಿಂಗ್ ಸೇವೆಯಲ್ಲಿ ಯಾವುದೇ ಅಸಮಂಜಸತೆಯನ್ನು ಪತ್ತೆ ಹಚ್ಚಬಲ್ಲ ‘ವಿಜನ್ ಕಂಪ್ಯೂಟಿಂಗ್’ ಅನ್ನೂ ಪಾಕಶಾಲೆಗಳಲ್ಲಿ ಅಡವಡಿಸಲಾಗಿದೆ. ಉದಾಹರಣೆಗೆ ಅಡಿಗೆಯಾಳು ಸಮವಸ್ತ್ರವನ್ನು ಧರಿಸಿರದಿದ್ದರೆ ಅದು ತಕ್ಷಣವೇ ಗುತ್ತಿಗೆದಾರನಿಗೆ ವರದಿಯನ್ನು ರವಾನಿಸುತ್ತದೆ. ವರದಿ ಸಲ್ಲಿಸಿದ ಕೆಲಸಮಯದ ಬಳಿಕವೂ ಕ್ರಮವನ್ನು ಕೈಗೊಳ್ಳದಿದ್ದರೆ ಅದು ಇನ್ನೊಂದು ವರದಿಯನ್ನು ಐಆರ್ಸಿಟಿಸಿ ಅಧಿಕಾರಿಗಳಿಗೆ ರವಾನಿಸುತ್ತದೆ.