ಅನೈತಿಕ ಸಂಬಂಧದ ಆರೋಪ: ಜೋಡಿಗೆ ಥಳಿಸಿ,ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು
ನಗಾಂವ್(ಅಸ್ಸಾಂ),ಜೂ.25: ಅಸ್ಸಾಮಿನಲ್ಲಿ ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ತಾಜಾ ಸೇರ್ಪಡೆಯಾಗಿ ನಗಾಂವ್ ಜಿಲ್ಲೆಯ ಝುಮುರಮುರ ಗ್ರಾಮದಲ್ಲಿ ಅನೈತಿಕ ಸಂಬಂಧದ ಆರೋಪದಲ್ಲಿ ಜೋಡಿಯೊಂದಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಗ್ರಾಮಸ್ಥರು ಮಹಿಳೆಯ ತಲೆ ಬೋಳಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರಿಗೆ ಸೋಮವಾರ ಬೆಳಿಗ್ಗೆಯಷ್ಟೇ ಮಾಹಿತಿ ಲಭಿಸಿದ್ದು,ಸ್ಥಳಕ್ಕೆ ಧಾವಿಸಿದ ಅವರು ತೀವ್ರವಾಗಿ ಗಾಯಗೊಂಡಿರುವ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೆರೆಯ ತುಬುಕಿ ಗ್ರಾಮದ ನಿವಾಸಿಯೋರ್ವ ರವಿವಾರ ರಾತ್ರಿ ಮಹಿಳೆಯ ಮನೆಗೆ ಬಂದಿದ್ದ. ಈ ಸಂದರ್ಭ ಮಹಿಳೆಯರು ಸೇರಿದಂತೆ ಮನೆಯ ಹೊರಗೆ ಸೇರಿದ್ದ ಗ್ರಾಮಸ್ಥರು ಇಬ್ಬರೂ ವಿವಾಹಿತರಾಗಿದ್ದರೂ ಅನೈತಿಕ ಸಂಬಂಧ ಹೊಂದುವ ಮೂಲಕ ತಮ್ಮ ಸಂಗಾತಿಗಳಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೋಡಿಯನ್ನು ಥಳಿಸಿದ್ದಾರೆ. ವ್ಯಕ್ತಿ ಅವರಿಂದ ತಪ್ಪಿಸಿಕೊಂಡು ಪರಾರಿಯಾಗಲೆತ್ನಿ ಸಿದ್ದನಾದರೂ ಬೆನ್ನಟ್ಟಿ ಹಿಡಿದ ಗ್ರಾಮಸ್ಥರು ಕಟ್ಟಿಹಾಕಿ ಇನ್ನಷ್ಟು ಥಳಿಸಿದ್ದಾರೆ.
ಮಹಿಳೆಯ ತಲೆ ಬೋಳಿಸಿ ಇಬ್ಬರ ಉಡುಪುಗಳನ್ನು ಹರಿದ ಗ್ರಾಮಸ್ಥರು ರಾತ್ರಿಯಿಡೀ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಇದು ಈ ತಿಂಗಳಲ್ಲಿ ರಾಜ್ಯದಲ್ಲಿ ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಂಡ ಮೂರನೇ ಪ್ರಕರಣವಾಗಿದೆ. ಈ ಹಿಂದೆ ಕರ್ಬಿ ಆಂಗ್ಲಾಂಗ್ನಲ್ಲಿ ಮಕ್ಕಳ ಅಪಹರಣಕಾರರೆಂದು ಶಂಕಿಸಿ ಇಬ್ಬರು ಸ್ನೇಹಿತರನ್ನು ಗ್ರಾಮಸ್ಥರು ಥಳಿಸಿ ಕೊಂದಿದ್ದರು. ಕಳೆದ ವಾರ ಗೋಪಾಲಪುರ ಜಿಲ್ಲೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಅವಿವಾಹಿತ ಜೋಡಿಯನ್ನು ಗುಂಪೊಂದು ಥಳಿಸಿತ್ತು.