ತೆರಿಗೆ ವಂಚನೆ ಪ್ರಕರಣ: ಐಆರ್ ಎಸ್ ಅಧಿಕಾರಿಗೆ 5 ವರ್ಷ, ಪತಿಗೆ 4 ವರ್ಷ ಜೈಲು
ಮುಂಬೈ, ಜೂ.28: ತೆರಿಗೆ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಐಆರ್ ಎಸ್ ಅಧಿಕಾರಿ ಮತ್ತು ಅವರ ಪತಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
2010ರಲ್ಲಿ ಮೆ. ರಾಮ್ ಡೆವಲ್ಪರ್ಸ್ ಸಂಸ್ಥೆಯಿಂದ 1.70 ಕೋಟಿ ರೂ. ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಐಆರ್ ಎಸ್ 1992 ಬ್ಯಾಚ್ ನ ಅಧಿಕಾರಿ ಸುಮಿತ್ರ ಬ್ಯಾನರ್ಜಿ (49) ಅವರಿಗೆ 5 ವರ್ಷ ಮತ್ತು ಅವರ ಪತಿ ಸುಬ್ರೋತೊ ಬ್ಯಾನರ್ಜಿ(52) ಅವರಿಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದೆ.
ಸುಮಿತ್ರ ಬ್ಯಾನರ್ಜಿ 2010ರಲ್ಲಿ 1.50ಕೋಟಿ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದರು.
ಇದೇ ವೇಳೆ ಪ್ರಕರಣದಲ್ಲಿ ಶಾಮೀಲಾಗಿರುವ ಸಹಾಯಕ ತೆರಿಗೆ ಆಯುಕ್ತರಾದ ಅಂಜಲಿ ಬಂಬೊಲೆ ಅವರಿಗೆ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸುಮಿತ್ರ ಬ್ಯಾನರ್ಜಿ ಮತ್ತು ಪತಿ ಸುಬ್ರೊತೊ ಬ್ಯಾನರ್ಜಿ ದಂಪತಿ 1.10 ಕೋಟಿ ರೂ ಮತ್ತು ಅಂಜಲಿ ಬಂಬೊಲೆ ಅವರಿಗೆ 40 ಲಕ್ಷ ರೂ .ದಂಡ ವಿಧಿಸಲಾಗಿದೆ. ಇದೀಗ ಇವರು ಜಾಮೀನು ಪಡೆದು ಹೊರಗಿದ್ದಾರೆ.