ಪಾಕ್ ವಿಧಾನಸಭೆಗೆ ಸ್ಪರ್ಧಿಸಲಿರುವ ಹಿಂದೂ ಮಹಿಳೆ
ಕರಾಚಿ, ಜು. ೬: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಂಧ್ ಪ್ರಾಂತದಲ್ಲಿ ಹಿಂದೂ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದು, ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರು ಇಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಮೇಘವಾರ್ ಸಮುದಾಯದ 31 ವರ್ಷದ ಸುನೀತಾ ಪರ್ಮಾರ್ ಸಿಂಧ್ ವಿಧಾನಸಭೆಗೆ ತರ್ಪಾರ್ಕರ್ ಜಿಲ್ಲೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ವಾಸಿಸುತ್ತಿದ್ದಾರೆ.
ಚುನಾವಣೆ ಜುಲೈ ೨೫ರಂದು ನಡೆಯಲಿದೆ.
ತನ್ನ ಕ್ಷೇತ್ರದ ಜನರ ಬದುಕನ್ನು ಉತ್ತಮಗೊಳಿಸುವ ಭರವಸೆ ನೀಡಿ ಹಿಂದೆ ಆಯ್ಕೆಯಾಗಿರುವ ಪ್ರತಿನಿಧಿಗಳು ತಮ್ಮ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಪರ್ಮಾರ್ ಹೇಳಿದ್ದಾರೆ.
‘‘ಮಹಿಳೆಯರು ದುರ್ಬಲರು ಮತ್ತು ಕೀಳು ಎಂದು ಭಾವಿಸುವ ದಿನಗಳು ಹೋದವು. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಇದು 21ನೇ ಶತಮಾನ. ಈಗ ನಾವು ಸಿಂಹದೊಂದಿಗೂ ಹೋರಾಡಲು ಸಿದ್ಧರಿದ್ದೇವೆ’’ ಎಂದು ಪರ್ಮಾರ್ ಹೇಳಿರುವುದಾಗಿ ಎಪಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.