ಕ್ಷಯ ರೋಗದ ಬಗ್ಗೆ ವಿಶ್ವಸಂಸ್ಥೆಯ ಘೋಷಣೆಯ ಕರಡಿನಲ್ಲಿ ಕೈಗೆಟಕುವ ಔಷಧಿಗಳ ಕಡೆಗಣನೆ
ಹೊಸದಿಲ್ಲಿ, ಜು.21: ಕ್ಷಯ ರೋಗವನ್ನು ಮೂಲೋತ್ಪಾಟನೆ ಮಾಡುವ ಬಗ್ಗೆ ಕಳೆದ ಎರಡು ತಿಂಗಳುಗಳಿಂದ ಜಗತ್ತಿನಾದ್ಯಂತದ ಆರೋಗ್ಯ ಅಧಿಕಾರಿಗಳು ನೀತಿಗಳನ್ನು ರಚಿಸುತ್ತಿದ್ದು, ಇದರ ಅಂತಿಮ ಕರಡು ಪ್ರತಿ ಸೆಪ್ಟೆಂಬರ್ ತಿಂಗಳಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ವಿಶ್ವಸಂಸ್ಥೆಯ ಪ್ರಧಾನ ಸಭೆಯ ಉನ್ನತ ಮಟ್ಟದ ಸಮಾವೇಶದಲ್ಲಿ ಬಿಡುಗಡೆಯಾಗಲಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿ ಅಂಶಗಳ (ಟ್ರಿಪ್ಸ್) ಮೂಲಕ ಕೈಗೆಟಕುವ ದರದಲ್ಲಿ ಔಷಧಿಯನ್ನು ಪಡೆಯುವ ಹಕ್ಕಿಗಾಗಿ ಹೋರಾಟ ನಡೆಸುತ್ತಿವೆ. ಕ್ಷಯ ರೋಗ ಮೂಲೋತ್ಪಾಟನೆ ಬಗ್ಗೆ ಸಿದ್ಧಗೊಳ್ಳುತ್ತಿರುವ ಕರಡಿನಲ್ಲಿ ಈ ಹಕ್ಕನ್ನು ಖಾಯಂಗೊಳಿಸಬೇಕು ಎಂದು ಭಾರತ, ಬ್ರೆಝಿಲ್, ದ.ಆಫ್ರಿಕ, ಈಜಿಪ್ಟ್ ಮುಂತಾದ ದೇಶಗಳು ಅಮೆರಿಕವನ್ನು ಆಗ್ರಹಿಸಿವೆ. ಆದರೆ ಸದ್ಯ ಸಿದ್ಧವಾಗಿರುವ ಅಂತಿಮ ಕರಡು ಪ್ರತಿಯಲ್ಲಿ ಈ ಹಕ್ಕನ್ನೇ ಕೈಬಿಡಲಾಗಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಅಮೆರಿಕವು ಈ ಕರಡು ಪ್ರತಿ ಮತ್ತು ಮುಂದೆ ನಡೆಯಲಿರುವ ಘೋಷಣೆಯಲ್ಲಿ ಟ್ರಿಪ್ಸ್ ಅನ್ನು ಕೈಬಿಡಬೇಕು ಎಂದು ಬಯಸಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇತರ ಜಿ-77 ಮತ್ತು ಇಯು ದೇಶಗಳ ಜೊತೆ ಸೇರಿ ಅಮೆರಿಕದ ಆಶಯದ ವಿರುದ್ಧ ಹೋರಾಟ ನಡೆಸುತ್ತಿವೆ.